ಪುರುಷರಲ್ಲಿ ಹೆಚ್ಚಾಗಿ ಕಿಡ್ನಿ ಸಮಸ್ಯೆ

ಪುರುಷರಲ್ಲಿ ಹೆಚ್ಚಾಗಿ ಕಿಡ್ನಿ ಸಮಸ್ಯೆ
Published on

ಶನಿವಾರಸಂತೆ: ಮದ್ಯ ಹಾಗೂ ರಾಸಾಯನಿಕಯುಕ್ತ ಪಾನೀಯ ಸೇವನೆಯಿಂದ ಹೆಚ್ಚಾಗಿ ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ಬೆಂಗಳೂರಿನ ಸ್ಪರ್ಷ ಆಸ್ಪತ್ರೆಯ ವೈದ್ಯ ಡಾ.ಅರುಣ್‌ಕುಮಾರ್ ಅಭಿಪ್ರಾಯಪಟ್ಟರು.

ಸಮಿಪದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯಕರ ಮೂತ್ರ ಜನಕಾಂಗ ಮತ್ತು ಮೂತ್ರಪಿಂಡದ ಕಾಯಿಲೆ ತಡೆಗಟ್ಟುವಿಕೆ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಗ್ರಾಮೀಣ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಪಾಲಕರಿಗೆ ಮತ್ತು ಮಕ್ಕಳಿಗೆ ಕಿಡ್ನಿ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ಬದಲಾದ ಆಹಾರ ಪದ್ಧತಿಯಿಂದ ದೊಡ್ಡವರಲ್ಲಿ, ಮಕ್ಕಳಲ್ಲಿ ಮೂತ್ರಪಿಂಡದ ಕಾಯಿಲೆ ಕಾಣಿಸಿಕೊಳ್ಳುತ್ತಿದೆ ಪುರುಷರಲ್ಲಿ ಹೆಚ್ಚಾಗಿ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಒಣಹಣ್ಣು ತಿನ್ನುವುದರಿಂದ, ಅತಿಯಾಗಿ ಉಪ್ಪು ಸೇವಿಸುವುದರಿಂದ, ಹೆಚ್ಚಾಗಿ ಕರಿದ ಮಾಂಸ ಸೇವನೆಯಿಂದ, ಕಲುಷಿತ ನೀರು ಕುಡಿಯುವುದರಿಂದ, ಕರಿದ ಎಣ್ಣೆ ಪದಾರ್ಥಗಳಲ್ಲಿ ತಯಾರಿಸಿದ ಆಹಾರ ಸೇವಿಸುವುದರಿಂದ ಚಾಕಲೇಟ್ ತಿನ್ನುವುದರಿಂದ ಮೂತ್ರಪಿಂಡ ಕಾಯಿಲೆ ಬರುತ್ತದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸುವ ಮೂಲಕ ಮೂತ್ರಪಿಂಡ ಕಾಯಿಲೆಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಪಾಲಕರಿಗೆ ಕಿಡ್ನಿ ಸಮಸ್ಯೆ ಬಗ್ಗೆ ಅರಿವು ಮೂಡಿಸುವುದರಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಿಡ್ನಿ ಸಮಸ್ಯೆಯನ್ನೂ ಸಹ ತಡೆಗಟ್ಟಬಹುದು ಎಂದು ಹೇಳಿದರು.

ಶಾಲಾ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್ ಕಾರ್ಯಕ್ರಮದ ಉದ್ದೇಶ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯ ಡಾ.ಅರುಣ್‌ಕುಮಾರ್, ಡಾ.ಪೂರ್ಣಿಮಾ ಗುರುಪ್ರಸಾದ್ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ವಿತರಿಸಿದರು.

ಎಸ್‌ಡಿಎಂಸಿ ಸದಸ್ಯ ವೆಂಕಟೇಶ್, ಸಹ ಶಿಕ್ಷಕ ಜಾನ್ಸನ್ ಡಿಸೋಜ, ಆಶಾ ಕಾರ್ಯಕರ್ತೆ ರೂಪಾ, ಎಸ್‌ಡಿಎಂಸಿ ಉಪಾಧ್ಯಕ್ಷ ಆನಂದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net