ಶಿಕ್ಷಕಿ ಅಪಹರಣ ಕೊಲೆಗೆ ಯತ್ನ

Published on

ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿಯನ್ನು ಅಪಹರಿಸಿ, ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕೃತ್ಯ ವರದಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಡಿಟೆಕ್ಟಿವ್ ಏಜೆನ್ಸಿ ಮಾಲೀಕ ಸತೀಶ್‌ರೆಡ್ಡಿ, ರಮಣ, ಸಲ್ಮಾನ್, ರವಿ ಎಂಬುವರನ್ನು ಬಂಧಿಸಿದ್ದು. ಎಲ್ಲರೂ ಬೆಂಗಳೂರು ಮೂಲದವರಾಗಿದ್ದಾರೆ.

ಪ್ರಕರಣದ ಹಿನ್ನೆಲೆ: ಅಪಹರಣಕ್ಕೊಳಗಾಗಿದ್ದ ಯೋಗ ಶಿಕ್ಷಕಿ ಮದುವೆಯಾಗಿ, ಬಳಿಕ ಪತಿಯಿಂದ ಪ್ರತ್ಯೇಕವಾಗಿ ವಾಸವಿದ್ದರು. ಇದರ ನಡುವೆ ಈಕೆಯ ಬಳಿಗೆ ಯೋಗ ಕಲಿಯಲು ಬರುತ್ತಿದ್ದ ಸತೀಶ್‌ರೆಡ್ಡಿ ಹೆಚ್ಚಿನ ಸಲುಗೆ ಬೆಳೆಸಿಕೊಂಡಿದ್ದ. ಇದು ಪ್ರೀತಿ ಪ್ರೇಮವಾಗಿ ಪರಿವರ್ತನೆಯಾಗಿದೆ. ಇದು ಕೆಲವೇ ತಿಂಗಳಲ್ಲಿ ಪರಸ್ಪರ ಕಲಹ ಗಲಾಟೆಗೆ ಕಾರಣವಾಗಿದೆ. ಇದರ ನಡುವೆ ಶಾಶ್ವತವಾಗಿ ಆಕೆಯ ನಂಟನ್ನು ಕಳೆದುಕೊಳ್ಳಲು ಪ್ರಿಯಕರ ಕೊಲೆಗೆ ತನ್ನ ಗ್ಯಾಂಗ್‌ನ ಜತೆ ಸೇರಿಕೊಂಡು ಯೋಜನೆ ರೂಪಿಸಿದ್ದಾನೆ. ಅದರಂತೆ ಕೊಪ್ಪಳದಲ್ಲಿ ಕದ್ದ ಕಾರಿನಲ್ಲಿ ಯೋಗ ಶಿಕ್ಷಕಿಯನ್ನು ಅಪಹರಿಸಲಾಗಿದೆ. ದಿಬ್ಬೂರಹಳ್ಳಿ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಬಂದು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಕೂಗಿಕೊಂಡಾಗ ಕತ್ತು ಹಿಸುಕಿ ಮಹಿಳೆಯನ್ನು ಕೊಲ್ಲಲು ಮುಂದಾಗಿದ್ದಾರೆ. ಆಕೆ ಸತ್ತಂತೆ ಕೆಳಗೆ ಬಿದ್ದಿದ್ದಾಳೆ. ದುರುಳರು ಆಕೆಯನ್ನು ಹೂತು ಹಾಕಲು ಗುಂಡಿ ಅಗೆಯುವಾಗ ತಪ್ಪಿಸಿಕೊಂಡ ಶಿಕ್ಷಕಿ ಅಲ್ಲಿಂದ ಓಡಿ ಬಂದಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದಿಬ್ಬೂರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೀವಂತ ಹೂತು ಹಾಕಲು ಯತ್ನ ಶಿಕ್ಷಕಿಯನ್ನು ಅರೆಬೆತ್ತಲೆಗೊಳಿಸಿ ಜೀವಂತ ಹೂತು ಹಾಕಲು ಆರೋಪಿಗಳು ಯತ್ನಿಸಿದ್ದಾರೆ. ಇದೇವೇಳೆ ಬುದ್ಧಿವಂತಿಕೆ ಪ್ರದರ್ಶಿಸಿದ ಸಂತ್ರಸ್ತೆ ಪ್ರಜ್ಞೆ ತಪ್ಪಿದಂತೆ ನಾಟಕವಾಡಿದ್ದಾಳೆ. ಈ ಮೂಲಕ ದುರುಳರ ದಿಕ್ಕುತಪ್ಪಿಸಿ, ಕೊನೆಗೆ ಅರಣ್ಯ ಪ್ರದೇಶದಿಂದ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾಳೆ.

ಯೋಗ ಶಿಕ್ಷಕಿಯನ್ನು ಅಪಹರಿಸಿ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣೆಯ ವ್ಯಾಪ್ತಿಯಲ್ಲಿ ಕೊಲೆಗೆ ಯತ್ನಿಸಿರುವ ಸಂಬಂಧ ಪ್ರಕರಣದ ವಿಚಾರಣೆ ನಡೆಯುತ್ತಿದೆ. ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. - ಕುಶಾಲ್ ಚೌಕ್ಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net