

ಆನೇಕಲ್: ಮೂರು ದಿನಗಳ ಹಿಂದೆ ಅಪಹರಣಕ್ಕೀಡಾಗಿದ್ದ ಬಾಲಕನ ಶವ ಪತ್ತೆಯಾಗಿದ್ದು, ಸಂಬಂಧಿಯೇ ಕೊಲೆ ಮಾಡಿರುವ ಶಂಕೆ ಉಂಟಾಗಿದೆ. ಬೆಂಗಳೂರಿನ ಶಿಕಾರಿಪಾಳ್ಯ ನಿವಾಸಿ ಮೊಹಮದ್ ಅಸೀಫ್ (10) ಕೊಲೆಗೀಡಾದ ಬಾಲಕ. ಸಂಬಂಧಿ ಮಹಮದ್ ಜಾವೀದ್ ಶೇಕ್ ಕೊಲೆ ಮಾಡಿರುವ ಶಂಕೆ ಮೂಡಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಬೆಂಗಳೂರು ಹೊರವಲಯ ಬೆಂಗಳೂರು ದಕ್ಷಿಣ ತಾಲ್ಲೂಕಿನ ಶಿಕಾರಿ ಪಾಳ್ಯದಿಂದ ಮಹಮದ್ ಅಸೀಫ್ನನ್ನು ಮೂರು ದಿನಗಳ ಹಿಂದೆ ಅಪಹರಿಸಲಾಗಿದ್ದು, ಆತನನ್ನು ಬಿಡಬೇಕೆಂದರೆ 25 ಲಕ್ಷ ರೂ. ಹಣ ನೀಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ಮಾತ್ರವಲ್ಲ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಒಡ್ಡಿದ್ದರು. ಇದರಿಂದ ಆತಂಕಕ್ಕೆ ಒಳಗಾದ ಬಾಲಕನ ಪಾಲಕರು ಹೆಬ್ಬಗೋಡಿ ಪೊಲೀಸರಿಗೆ ದೂರು ನೀಡಿದ್ದರು. ಬಾಲಕನ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ನಿನ್ನೆ ರಾತ್ರಿ ಜಿಗಣಿ ಸಮೀಪದ ನಂಜಾಪುರ ಬಳಿ ಬಾಲಕನ ಶವ ಪತ್ತೆಯಾಗಿತ್ತು. ಬಡಾವಣೆಯೊಂದರೆ ಸೆಕ್ಯುರಿಟಿ ಶೆಡ್ನಲ್ಲಿ ಬಾಲಕನ ಶವ ಪತ್ತೆಯಾಗಿದ್ದು, ಅಪಹರಣಕಾರರು ಬಾಲಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದರು.
ಸಂಬಂಧಿ ಮೇಲೆ ಸಂದೇಹ: ಕೊಲೆಗೀಡಾಗಿರುವ ಬಾಲಕನ ಮನೆಯಲ್ಲಿ ಬಾಡಿಗೆಗಿದ್ದ ಸಂಬಂಧಿ ಮಹಮದ್ ಜಾವೀದ್ ಶೇಕ್ ಕೊಲೆ ಮಾಡಿರುವ ಕುರಿತು ಸಂದೇಹವಿದೆ. ಮೃತಪಟ್ಟಿರುವ ಬಾಲಕನ ಸ್ನೇಹಿತ ಇರ್ಫಾನ್ ಈ ಬಗ್ಗೆ ಸುಳಿವು ನೀಡಿದ್ದಾನೆ. ಒಂದು ವಾರದ ಹಿಂದೆ ಇರ್ಫಾನ್ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಜಾವೀದ್ ಕೊಲೆ ಮಾಡಲು ಯತ್ನಿಸಿದ್ದ. ಆದರೆ ಸುತ್ತಮುತ್ತ ಕುರಿಗಾಹಿಗಳು ಇದ್ದಿದ್ದರಿಂದ ಅಂದು ಇರ್ಫಾನ್ನ್ನು ಜಾವೀದ್ ಬಿಟ್ಟು ಕಳಿಸಿದ್ದ. ಬಳಿಕ ಮೂರು ದಿನಗಳ ಹಿಂದೆ ಅವನೇ ಅಸೀಫ್ನನ್ನು ಅಪಹರಿಸಿರಬಹುದು ಎಂದು ಶಂಕಿಸಲಾಗಿದೆ.
ಅಷ್ಟಕ್ಕೂ ಇಷ್ಟೆಲ್ಲ ಯಾಕಾಗಿ?: ಮಹಮದ್ ಜಾವೀದ್ಗೆ ಅಸೀಫ್ ತಂದೆ ಸಂಬಂಧದಲ್ಲಿ ಮಾವ ಆಗಬೇಕಿದ್ದು, ಈತ ಹದಿನೈದು ದಿನಗಳ ಹಿಂದೆ ಛತ್ತೀಸ್ಗಢದಿಂದ ಬೆಂಗಳೂರಿಗೆ ಬಂದಿದ್ದ. ತನ್ನ ಮದುವೆ ನಿಶ್ಚಯವಾಗಿದ್ದರಿಂದ ಅದಕ್ಕಾಗಿ ಹಣ ಹೊಂದಿಸುವ ಸಲುವಾಗಿ ಇವನು ಬೆಂಗಳೂರಿಗೆ ಬಂದಿದ್ದು, ಅದೇ ಕಾರಣಕ್ಕೆ ಅಪಹರಣ ಮಾಡಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಶಂಕಿತ ಆರೋಪಿಯ ಪತ್ತೆಗೆ ಹೆಬ್ಬಗೋಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.