ಜನನ ಮರಣ ದಾಖಲೀಕರಣದಲ್ಲಿ ಕಿಕ್​ಬ್ಯಾಕ್?

Keonics
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಜನನ- ಮರಣ ನೋಂದಣಿ ದಾಖಲೀಕರಣದ ಸ್ಕಾ್ಯನಿಂಗ್ ಹಾಗೂ ಡಿಜಿಟಲೀಕರಣ ಕಾರ್ಯದಲ್ಲಿ ‘ಕಿಕ್​ಬ್ಯಾಕ್’ ಉದ್ದೇಶಕ್ಕೆ ನಿಯಮಗಳನ್ನು ಗಾಳಿಗೆ ತೂರಿರುವ ಗುಮಾನಿ ಎದ್ದಿದೆೆ. ಹಾಗೆಯೇ, ಇದೇ ವಿಚಾರದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಹಾಗೂ ಲೋಕಾಯುಕ್ತಕ್ಕೆ ದೂರು ಕೂಡ ಸಲ್ಲಿಕೆಯಾಗಿದೆ.

ಇ-ಜನ್ಮ ತಂತ್ರಾಂಶಕ್ಕೆ ಹಿಂದಿನ ಅವಧಿಯ ಜನನ-ಮರಣ ನೋಂದಣಿ ದಾಖಲೆಗಳನ್ನು ಶಾಶ್ವತವಾಗಿ ಕಾಯ್ದಿರಿಸಲು ಸ್ಕಾ್ಯನಿಂಗ್ ಹಾಗೂ ಡಿಜಿಟಲೀಕರಣಕ್ಕೆ 2022-23ರಲ್ಲಿ ಏಳುವರೆ ಕೋಟಿ ರೂ. ಹಾಗೂ 2023-24ನೇ ಸಾಲಿಗೆ ಏಳೂವರೆ ಕೋಟಿ ರೂ. ಬಿಡುಗಡೆಯಾಗಿದೆ. ಈ ಹಣ ಸರಿಯಾದ ಕ್ರಮದಲ್ಲಿ ಬಳಕೆಯಾಗುತ್ತಿಲ್ಲ ಎಂದು ದೂರಲಾಗಿದೆ. ಒಂದು ವರ್ಷದಲ್ಲಿ ವೆಚ್ಚ ಮಾಡುವ ಏಳೂವರೆ ಕೋಟಿ ರೂ.ವನ್ನು ಟೆಂಡರ್ ಕರೆಯದೆ ನೀಡಲು ಅವಕಾಶವಿಲ್ಲ. ಆದರೆ ‘ಅನ್ಯ’ ಉದ್ದೇಶದಿಂದ, 23 ಜಿಲ್ಲೆಗಳ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಿಂದ ಪ್ರತ್ಯೇಕವಾಗಿ ಪ್ರಸ್ತಾವನೆಯನ್ನು ಕಿಯೋನಿಕ್ಸ್​ಗೆ ಕಳಿಸಿ ಅಲ್ಲಿಂದ ಕೆಲಸ ಮಾಡಿಸುವ ಅಡ್ಡದಾರಿ ಕಂಡುಕೊಳ್ಳಲಾಗಿದೆ. ಕಿಯೋನಿಕ್ಸ್​ಗೆ ಒಂದು ಕಾರ್ಯಕ್ಕಾಗಿ ಒಂದು ಕೋಟಿ ರೂ. ಮಿತಿಗೊಳಪಟ್ಟು ಮಾತ್ರ ಆದೇಶ ನೀಡಬೇಕಾಗುತ್ತದೆ. 4ಜಿ ವಿನಾಯಿತಿಯಲ್ಲಿ ಕೆಲಸ ಆಗಬೇಕೆಂದರೆ ಕಿಯೋನಿಕ್ಸ್​ಗೆ ಆದೇಶ ಪಡೆಯಲು ಇರುವುದು ಒಂದು ಕೋಟಿ ರೂ. ಒಳಗಿನ ಕಾರ್ಯಕ್ಕೆ ಮಾತ್ರ. ಈ ದಾರಿ ಕಂಡುಕೊಂಡು ಜಿಲ್ಲೆಗಳಿಂದ ಒಂದು ಕೋಟಿ ರೂ. ಒಳಗಿನ ಪ್ರಸ್ತಾವನೆ ಪಡೆದು ಕಾರ್ಯ ಮಾಡಿಸಿಕೊಳ್ಳಲಾಗಿದೆ.

ಸರ್ಕಾರ ನೀಡಿದ ಅನುದಾನವನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಿ ಅಲ್ಲಿಂದ ಪಾವತಿ ಆಗುವಂತೆ ಮಾಡುವ ಮೂಲಕ 4ಜಿ ರಿಯಾಯಿತಿ ಪಡೆಯಲಾಗಿದೆ. 4ಜಿ ರಿಯಾಯಿತಿ ಪಡೆದರೆ ನಿರ್ದಿಷ್ಟ ವ್ಯಕ್ತಿಗಳಿಗೆ ಕೆಲಸ ವಹಿಸಬಹುದು. ಇದರಿಂದ ಆಯಕಟ್ಟಿನ ಅಧಿಕಾರಿಗಳಿಗೆ ಲಾಭವಾಗಲಿದೆ. ಎರಡು ವರ್ಷ ಇದೇ ದಾರಿ ಹಿಡಿಯಲಾಗಿದೆ. ಅಲ್ಲದೇ ಉಳಿಕೆ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸದೇ ಉಳಿತಾಯ ಖಾತೆಯಲ್ಲಿ ಇಟ್ಟುಕೊಳ್ಳಲಾಗಿದೆ.

2023-24ನೇ ಸಾಲಿನಲ್ಲಿಯೂ ಸಹ ಜನನ ಮರಣ ನೋಂದಣಿ ದಾಖಲೆಗಳ ಡಿಜಿಟಲೀಕರಣಕ್ಕೆ ಏಳೂವರೆ ಕೋಟಿ ರೂ. ಮೀಸಲಿಟ್ಟಿದ್ದು, ಜಿಲ್ಲಾ ಕಚೇರಿಗಳಿಂದ ಕಾರ್ಯಾದೇಶ ನೀಡಿ ನಿಯಮ ಉಲ್ಲಂಘಿಸಲಾಗುತ್ತಿದೆ ಎಂಬುದು ಗಂಭೀರ ಆರೋಪ. ಈ ಕಾರ್ಯಕ್ಕೆ ಸಹಕಾರ ಆಗಲೆಂದೇ ಜಂಟಿ ನಿರ್ದೇಶಕರು (ಆಡಳಿತ) ಗೆಜೆಟೆಡ್ ಅಧಿಕಾರಿಗೆ ಬಟವಾಡೆ ಅಧಿಕಾರ ಪ್ರತ್ಯಾಯೋಜಿಸಿರುವುದೂ ಸಹ ಕಂಡುಬಂದಿದೆ. ಇಷ್ಟು ದೊಡ್ಡ ಯೋಜನೆಗೆ ಕಚೇರಿ ಮುಖ್ಯಸ್ಥರು ಒಪ್ಪಿಗೆ ಸಹಿ ಮಾಡಬೇಕಾಗುತ್ತದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಅಧಿಕಾರ ಪ್ರತ್ಯಾಯೋಜನೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆಗ ವಿನಾಯ್ತಿ ಈಗ ರದ್ದು

ಹೊಸ ಸರ್ಕಾರ ಬಂದ ಬಳಿಕ ಕಿಯೋನಿಕ್ಸ್​ನಲ್ಲಿ ನಡೆಯುವ ವ್ಯವಹಾರಗಳಿಗೆ ಕಡಿವಾಣ ಹಾಕಲು 4ಜಿ ರಿಯಾಯ್ತಿಗೆ ತಡೆಹಾಕಿದೆ. 2023ರ ಮಾ.3ರಲ್ಲಿ ಐಟಿಬಿಟಿ ಸಂಬಂಧಿತ ಸೇವೆ ಒದಗಿಸಲು 4ಜಿ ವಿನಾಯಿತಿ ನೀಡಲಾಗಿತ್ತು. ಆದರೆ, 2023ರ ನ.22ರ ಆದೇಶದಲ್ಲಿ ಈ ವಿನಾಯಿತಿ ತಡೆ ಹಿಡಿಯಲಾಗಿದೆ. ಯೋಜನೆ ಮತ್ತು ಸಾಂಖ್ಯಿಕ ಇಲಾಖೆಗೆ ಸಾಮಾಜಿಕ ಕಾರ್ಯಕರ್ತ ಮರಿಲಿಂಗ ಗೌಡ ಮಾಲಿಪಾಟೀಲ್ ದೂರು ಸಲ್ಲಿಸಿದ್ದು, ಹಣ ದುರುಪಯೋಗದ ಸಂಶಯ ವ್ಯಕ್ತಪಡಿಸಿದ್ದು, ತನಿಖೆ ನಡೆಸುವಂತೆಯೂ ಒತ್ತಾಯಿಸಿದ್ದಾರೆ.

ಪ್ರಮುಖ ಸಂಗತಿಗಳು

* ಏಳೂವರೆ ಕೋಟಿ ರೂ. ಕಾರ್ಯಕ್ಕೆ ಟೆಂಡರ್ ಕರೆದಿದ್ದರೆ ಸ್ಪರ್ಧಾತ್ಮಕ ಬೆಲೆಯಲ್ಲಿ ಸೇವೆ ಸಿಗುತ್ತಿತ್ತು.

* ಕಾಮಗಾರಿಯನ್ನು ಕಿಯೋನಿಕ್ಸ್ ಮೂಲಕ ಮಾಡಿಸಿಕೊಳ್ಳಲು ಕಂಡುಕೊಂಡ ದಾರಿ ಅನುಮಾನಾಸ್ಪದ.

* ತುರ್ತು ಅಲ್ಲದ ಇಂತಹ ಕಾರ್ಯಕ್ಕೂ 4ಜಿ ವಿನಾಯಿತಿ ಪಡೆದುಕೊಳ್ಳುವ ಅಗತ್ಯವಾದರೂ ಏನಿದೆ?

* ಉಳಿಕೆ ಹಣವನ್ನು ಉಳಿತಾಯ ಖಾತೆಯಲ್ಲಿಟ್ಟುಕೊಂಡಿದ್ದೂ ಸಹ ಆರ್ಥಿಕ ಇಲಾಖೆ ನಿಯಮಗಳಿಗೆ ವಿರುದ್ಧ.

* ಜಿಲ್ಲಾವಾರು ಪ್ರಸ್ತಾವನೆ ಪಡೆದಿದ್ದರೂ ಮೂರು ಸಂಸ್ಥೆಗಳಿಗೆಷ್ಟೇ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿದೆ.

* ಆರ್ಥಿಕ ಇಲಾಖೆಯ ಹಲವು ನಿಯಮಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net