More

    ಗಾಂಧೀಜಿ ಉದ್ಘಾಟಿಸಿದ್ದ ಬಾವಿ ಕೆಂಗೇರಿಯಲ್ಲಿದೆ, ನಿಮಗೆ ಗೊತ್ತೆ?

    ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಂದ ಉದ್ಘಾಟನೆ ಕಂಡಿದ್ದ ಕೆಂಗೇರಿಯ ಕುಡಿಯುವ ನೀರಿನ ಬಾವಿ ಸಂರಕ್ಷಣೆ ಮಾಡಿ ಅದನ್ನು ಸ್ಮಾರಕವಾಗಿ ಘೋಷಿಸಲು ಸೋಮವಾರ (ಜ.8) ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

    1934ರಲ್ಲಿ ಗಾಂಧೀಜಿ ಅವರು ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ಕೆಂಗೇರಿ ಗ್ರಾಮದಲ್ಲಿ ಕುಡಿಯುವ ನೀರಿಗೆ ತುಸು ಸಮಸ್ಯೆ ಇತ್ತು. ಆಗಿನ ಪ್ರಮುಖರ ಮನವಿಯಂತೆ ಬೆಂಗಳೂರು ಅಭಿವೃದ್ಧಿ ಮಂಡಳಿ (ಬಿಡಿಬಿ) ವೃತ್ತಾಕಾರದ ಮಾದರಿಯಲ್ಲಿ ತೆರೆದ ಬಾವಿಯನ್ನು ತೋಡಿಸಿ ಸಾರ್ವಜನಿಕರಿಗೆ ನೀರು ಪೂರೈಸಲು ಮುಂದಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಗಾಂಧೀಜಿಯವರು ಗ್ರಾಮಾಭಿವೃದ್ಧಿಯ ಭಾಗವಾಗಿ ಜನರಿಗೆ ಜೀವಜಲ ಕಲ್ಪಿಸುವುದು ಸಮಾಜಸೇವೆಯ ಭಾಗ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಉದ್ಘಾಟನೆಯನ್ನೂ (1934ರ ಜ.1) ನೆರವೇರಿಸಿದ್ದರು.

    ಗಾಂಧೀಜಿ ಉದ್ಘಾಟಿಸಿದ್ದ ಕಾರಣ ಹಲವು ದಶಕಗಳ ಕಾಲ ಈ ಬಾವಿ ಸ್ಥಳೀಯ ಜನರ ನೀರಿನ ಆಸರೆ ಆಗಿತ್ತು. ಕೆಲ ದಶಕಗಳ ಹಿಂದೆ ಈ ಬಾವಿ ಇದ್ದ ಜಾಗವನ್ನು ಟ್ರಸ್ಟ್ ಒಂದಕ್ಕೆ ನೀಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಂತರ್ಜಲ ಕುಸಿತದಿಂದ ಬಾವಿ ಬರಿದಾಗಿ ಉಪಯೋಗಕ್ಕೆ ಬಾರದಂತಾಗಿತ್ತು.

    ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಯುವಕರು ‘ಕೆಂಗೇರಿ ನಾಗರಿಕರ ಹಿತರಕ್ಷಣಾ ವೇದಿಕೆ’ ರಚಿಸಿ ಬಾವಿ ಸಂರಕ್ಷಣೆಗೆ ಮುಂದಾಗಿದ್ದಾರೆ. ಬಾವಿ ಸುತ್ತ ಬೆಳೆದಿದ್ದ ಕಳೆ ಸಸ್ಯಗಳನ್ನು ತೆರವುಗೊಳಿಸಿ ಬಾವಿಗೆ ಸುಣ್ಣಬಣ್ಣ ಬಳಿದು ಸುತ್ತಲೂ ಸ್ವಚ್ಚಗೊಳಿಸಲಾಗಿದೆ. ಗಾಂಧೀಜಿ ನೆನಪಿಗೆ ಈ ಬಾವಿಯನ್ನು ಸ್ಮಾರಕವಾಗಿ ಮಾನ್ಯ ಮಾಡಬೇಕು ಎಂದು ವೇದಿಕೆಯ ಪ್ರಮುಖರು ಒತ್ತಾಯಿಸಿದ್ದಾರೆ.

    ಇದೇ ವೇಳೆ ಮೈಸೂರು ಕುರಿತು ಕಥೆಗಳ ಮೂಲಕ ಪ್ರಸಿದ್ಧಿ ಪಡೆದಿರುವ ಧಮೇಂದ್ರ ಕುಮಾರ್ ಅವರಿಗೆ ‘ಮೈಸೂರಿನ ಕಥೆಗಳ ಸಾಮ್ರಾಟ’ ಬಿರುದು ನೀಡಿ ಗೌರವಿಸಲಾಗುತ್ತದೆ.

    90ನೇ ವರ್ಷದ ಸಂಸ್ಮರಣೆ ಇಂದು:

    ಮಹಾತ್ಮ ಗಾಂಧಿ ಅವರು ಉದ್ಘಾಟಿಸಿದ್ದ ಬಾವಿಯ 90ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮವನ್ನು ಶಾಸಕ ಎಸ್.ಟಿ.ಸೋಮಶೇಖರ್ ಸೋಮವಾರ ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ. ಸ್ಥಳೀಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಭಾವಿಯನ್ನು ಸ್ಮಾರಕವಾಗಿಸಲು ಜಾಗೃತಿ ಮೂಡಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts