

ಶಿಡ್ಲಘಟ್ಟ: ತಾಲೂಕಿನ ಜಂಗಮಕೋಟೆ ಹೋಬಳಿಯ 2,823 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದು, ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಭೂಮಿಯನ್ನು ಹಸ್ತಾಂತರಿಸಲು ಸಿದ್ಧ ಎಂದು ಕೆಐಎಡಿಬಿ ಜಮೀನುಗಳ ರೈತರ ಹೋರಾಟ ಸಮಿತಿಯ ರಾಮಾಂಜಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೆಐಎಡಿಬಿಗೆ ಜಮೀನು ನೀಡಲು ಸಿದ್ಧ ಇರುವ ಜಮೀನುಗಳ ರೈತರ ಹೋರಾಟ ಸಮಿತಿಯ ರೈತರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯ ಸುಮಾರು 2,823 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, 1200ಕ್ಕೂ ಹೆಚ್ಚು ರೈತರಿಗೆ ನೋಟಿಸ್ ಜಾರಿ ಮಾಡಿದೆ. ಈ ಪೈಕಿ 860ಕ್ಕೂ ಹೆಚ್ಚು ರೈತರು ಜಮೀನು ನೀಡಲು ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಇದನ್ನು ಸಹಿಸದ ಕೆಲ ರೈತ ಸಂಘಟನೆಗಳ ಮುಖಂಡರು, ಆಯುಕ್ತರು ಮತ್ತು ವಿಶೇಷ ಭೂ ಸ್ವಾಧೀನ ಅಧಿಕಾರಿಯನ್ನು ಭೇಟಿ ಮಾಡಿರುವವರಲ್ಲಿ ಬೆರಳೆಣಿಕೆಯಷ್ಟು ರೈತರಿಲ್ಲ ಎಂದು ಟೀಕೆ ಮಾಡುವುದು ಸರಿಯಲ್ಲ ಎಂದರು.
ಇಷ್ಟವಿಲ್ಲದಿದ್ದರೆ ನಿಮ್ಮ ಭೂಮಿ ಕೊಡಬೇಡಿ. ನಮ್ಮ ಭೂಮಿ ಕೊಡುವುದು, ಬಿಡುವುದು ನಮಗೆ ಬಿಟ್ಟದ್ದು, ಇದರಲ್ಲಿ ನಿಮ್ಮ ಹಸ್ತಕ್ಷೇಪ ಸರಿಯಲ್ಲ ಎಂದರು.
ತಾಲೂಕಿನಲ್ಲಿ ಅತಿ ಹೆಚ್ಚು ಕೃಷಿ ಭೂಮಿ ವಾಣಿಜ್ಯ ಭೂಮಿಯಾಗಿ ಪರಿವರ್ತನೆಯಾಗಿರುವುದು ಜಂಗಮಕೋಟೆ ಹೋಬಳಿಯಲ್ಲಿ. ಖಾಸಗಿ ರಿಯಲ್ ಎಸ್ಟೇಟ್ ಉದ್ಯಮಿಗಳು ಕೃಷಿ ಭೂಮಿ ಖರೀದಿ ಮಾಡಿ ಲೇಔಟ್ ಮಾಡಿದಾಗ ಇಲ್ಲದ ನಿಮ್ಮ ಕಾಳಜಿ, ಸರ್ಕಾರ ಕೈಗಾರಿಕೆ ಸ್ಥಾಪಿಸಲು ಹೆಚ್ಚಿನ ಹಣ ನೀಡಿ ರೈತರಿಂದ ಜಮೀನು ಪಡೆಯುವಾಗ ಈ ಧೋರಣೆ ಏಕೆ ಎಂದು ಭೂಮಿ ನೀಡಲು ವಿರೋಧಿಸುವ ರೈತರು ಹಾಗೂ ಮುಖಂಡರನ್ನು ಪ್ರಶ್ನಿಸಿದರು.
ಜಂಗಮಕೋಟೆ ಹೋಬಳಿಯಲ್ಲಿ ಬಡವರಿಂದ ಕೇವಲ 1 ಲಕ್ಷ, 2 ಲಕ್ಷ ರೂ. ಕೊಟ್ಟು ನೋಂದಣಿ ಮಾಡಿಕೊಂಡಿರುವ ಸುಮಾರು 520 ಎಕರೆ ಭೂಮಿ ಪಿಎಸ್‌ಎಲ್ ಕಂಪನಿ ಹೆಸರಲ್ಲಿದ್ದು, ಅಂತಹ ರಿಯಲ್ ಎಸ್ಟೇಟ್ ಕಂಪನಿಗಳ ಜತೆ ಗುರುತಿಸಿಕೊಂಡಿರುವ ಕೆಲವರು ನಿಜವಾದ ರೈತರ ಬಗ್ಗೆ ಲಘುವಾಗಿ ಮಾತನಾಡುವುದು ಒಳಿತಲ್ಲ ಎಂದರು.
ಪರಿಶಿಷ್ಟ ಜಾತಿ, ಪಂಗಡದವರ ಜಮೀನಿಗೂ, ಸಾಮಾನ್ಯ ವರ್ಗದವರ ಜಮೀನಿಗೂ ಸಮಾನವಾಗಿ ಹಣ ಸಿಗುತ್ತದೆ ಎಂಬ ಕಾರಣದಿಂದ ಕೆಐಎಡಿಬಿ ಭೂ ಸ್ವಾಧೀನಕ್ಕೆ ವಿರೋಧ ಪಡಿಸಲಾಗುತ್ತಿದೆ ಎಂದರು.
ರೈತರಾದ ಎನ್.ಸಿ.ಸುಬ್ರಮಣಿ, ವಾಸುದೇವ, ರಾಮದಾಸ, ಮುನೇಗೌಡ, ರವಿ, ಆಂಜಿನಪ್ಪ, ತಿಪ್ಪೇಗೌಡ, ಪ್ರಭು, ನರಸಿಂಹ ಇತರರು ಇದ್ದರು.