

ಮಂಗಳೂರು: ಆರು ತಿಂಗಳ ಹಿಂದಷ್ಟೇ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ದಾಸೇಗೌಡ ಅವರ ಮಂಗಳೂರು ಮತ್ತು ಮಂಡ್ಯದಲ್ಲಿರುವ ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ಎಸಿಬಿ ಅಧಿಕಾರಿಗಳು ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಸ್ಥಿರ ಹಾಗೂ ಚರ ಆಸ್ತಿ ಪತ್ತೆ ಮಾಡಿದ್ದಾರೆ.
ಮಂಗಳೂರಿನ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದ ತಂಡ ಮುಂಜಾನೆ 5 ಗಂಟೆಗೆ ಕಾರ್ಯಾಚರಣೆ ಆರಂಭಿಸಿತ್ತು. ನಗರದ ಬಿಜೈ ಅಪಾರ್ಟ್‌ಮೆಂಟ್‌ಗೆ ಅಧಿಕಾರಿಗಳು ತೆರಳಿದಾಗ ಮನೆ ಬಾಗಿಲಿಗೆ ಬೀಗ ಹಾಕಲಾಗಿತ್ತು. ಅತ್ತ ಮಂಡ್ಯದ ಎರಡು ಮನೆಗಳ ಮೇಲೆ ದಾಳಿ ನಡೆದಿದ್ದು, ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿ 8 ಸೈಟ್‌ಗಳು, ಮಂಡ್ಯದಲ್ಲಿ 1 ಮನೆ, 1 ಫ್ಲಾೃಟ್, 580 ಗ್ರಾಂ ಚಿನ್ನ, 6.600 ಕಿ.ಗ್ರಾಂ ಬೆಳ್ಳಿ, 1 ಮಾರುತಿ ಎರ್ಟಿಗಾ ಕಾರು, ಮೂರು ದ್ವಿಚಕ್ರ ವಾಹನಗಳು, ಮನೆಯಲ್ಲಿ 15 ಲಕ್ಷ ರೂ. ಅಧಿಕ ಗೃಹೋಪಯೋಗಿ ವಸ್ತುಗಳು, ವಿವಿಧ ಬ್ಯಾಂಕ್‌ಗಳಲ್ಲಿ 1 ಲಾಕರ್ ಹಾಗೂ 10 ಲಕ್ಷ ರೂ. ಅಧಿಕ ನಗದು ಪತ್ತೆಯಾಗಿದೆ. ಇದನ್ನೂ ಓದಿ: 2ನೇ ಪತ್ನಿ ಮನೆಯಲ್ಲೇ ಇರುತ್ತಿದ್ದ ಪತಿ; ಕಿಡ್ನಾಪ್ ಮಾಡಿಸಿದ ಮೊದಲ ಪತ್ನಿ!
ದಾಸೇಗೌಡನಿಗೆ ಮಂಡ್ಯದಲ್ಲಿ ಮೂರು ಮನೆಗಳಿದ್ದು, ಅಧಿಕಾರಿಗಳು ದಾಳಿ ನಡೆಸಿದಾಗ ಆತ ಮಂಡ್ಯ ನಗರದ ಬಂಗಲೆಯಲ್ಲಿದ್ದ. ಇನ್ನೊಂದು ಮನೆಯಲ್ಲಿ ಆತನ ಸ್ನೇಹಿತರು ಮತ್ತು ಸಂಬಂಧಿಕರು ಇದ್ದಾರೆ. ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಅವರ ಸ್ನೇಹಿತ ಆಡಿಟರ್ ಕುಮಾರ್ ಎಂಬುವರ ಚಾಮುಂಡೇಶ್ವರಿನಗರ 11ನೇ ಕ್ರಾಸ್‌ನ ಸಮೃದ್ಧಿ ನಿಲಯದ ಮೇಲೆ ದಾಳಿ ಮಾಡಿ, ದಾಖಲೆ ವಶಕ್ಕೆ ಪಡೆಯಲಾಗಿದೆ.
ಮಂಗಳೂರಿನ ಎಂಆರ್‌ಪಿಎಲ್, ಎಸ್‌ಇಝಡ್‌ಗಳಿಗೆ ನೂರಾರು ರೈತರ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿದ ಅಧಿಕಾರಿ ದಾಸೇಗೌಡ. ಈ ಪ್ರಕ್ರಿಯೆಯುದ್ದಕ್ಕೂ ಬಡ ರೈತರಿಂದ ಲಂಚ ಸ್ವೀಕಾರ ಮಾಡುತ್ತಿದ್ದ ಆರೋಪ ಕೇಳಿಬಂದಿದ್ದರೂ ಸಿಕ್ಕಿಬಿದ್ದಿರಲಿಲ್ಲ. ಕಳೆದ ಡಿಸೆಂಬರ್‌ನಲ್ಲಿ 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದಿದ್ದ. ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಬಳಿಕ ಜಾಮೀನು ಸಿಕ್ಕಿತ್ತು.