

ವಿಜಯವಾಣಿ ಸುದ್ದಿಜಾಲ ಕಾರವಾರ
ಮುಡಗೇರಿಯಲ್ಲಿ ಮಿನಿ ಅಥವಾ ಮೀಡಿಯಂ ಟೆಕ್ಸ್ ಟೈಲ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ತಾಲೂಕಿನ ಮುಡಗೇರಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಕೆಐಡಿಬಿಗೆ ಭೂಮಿ ನೀಡಿದ ರೈತರಿಗೆ ಚೆಕ್ ವಿತರಣೆ ಮಾಡಿ ಅವರು ಮಾತನಾಡಿದರು.
ಈ ಹಿಂದೆ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯಕ್ಕೆ 10 ಲಕ್ಷ ಕೋಟಿ ಹೂಡಿಗೆ ಒಪ್ಪಂದವಾಗಿದೆ. ಅದರಲ್ಲಿ ಕೆಲವು ಕೈಗಾರಿಕೆಯನ್ನೂ ಇಲ್ಲಿ ತರಲು ಪ್ರಯತ್ನಿಸಲಾಗುವುದು. ನೌಕಾಸೇನೆಗೆ ಸಂಬಂಧಿಸಿದ ಕೈಗಾರಿಕೆ ತರಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಸರ್ಕಾರದಿಂದ ಸಾಕಷ್ಟು ಸಬ್ಸಿಡಿ ಸಿಗುತ್ತದೆ. ನೀವೂ ಸ್ವಂತ ಉದ್ಯಮ ಪ್ರಾರಂಭಿಸಿ ಉದ್ಯಮಿಗಳಾಗಿ, ಸ್ವಂತ ಮಾಲೀಕರಾಗಿ ಎಂದು ಕರೆ ನೀಡಿದರು.
ಎಕರೆಗೆ 50 ಲಕ್ಷ ಪರಿಹಾರ:
ಮುಡಗೇರಿಯಲ್ಲಿ ಪ್ರತಿ ಎಕರೆಗೆ 3 ಲಕ್ಷ ರೂ. ಬೆಲೆ ಇದೆ. ಅದರ ನಾಲ್ಕು ಒಟ್ಟು ಎಂದರೆ 12 ಲಕ್ಷ ರೂ. ಪರಿಹಾರ ನೀಡಲು ನಿಯಮದಲ್ಲಿ ಅವಕಾಶವಿದೆ. ವಾಣಿಜ್ಯ ಬೆಲೆ ಲೆಕ್ಕ ಹಾಕಿದರೂ ಎಕರೆಗೆ ಗರಿಷ್ಠ 40 ಲಕ್ಷ ರೂ. ಪರಿಹಾರ ಕೊಡಲು ಸಾಧ್ಯ. ಆದರೆ, ಶಾಸಕಿ ರೂಪಾಲಿ ನಾಯ್ಕ ವಿಶೇಷ ಪ್ರಯತ್ನ ಮಾಡಿ ಎಕರೆಗೆ 50.ಲಕ್ಷ ರೂ. ಪರಿಹಾರ ಕೊಡಿಸಿದ್ದಾರೆ ಎಂದರು.
ನನ್ನದೇ ಕ್ಷೇತ್ರದಲ್ಲಿ ಬಾಗಲಕೋಟೆಯಲ್ಲಿ ಎಕರೆಗೆ 18 ಲಕ್ಷ ರೂ. ಪರಿಹಾರ ಕೊಡಲಾಗಿದೆ ಆದರೆ, ಮುಡಗೇರಿಯಲ್ಲಿ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಸಿಗದಷ್ಟು ಪರಿಹಾರ ಸಿಕ್ಕಿದೆ.
ಭೂಮಿ ನೀಡಿದವರಿಗೆ ಸ್ಟಾಂಪ್ ಡ್ಯೂಟಿಯಲ್ಲಿ ರಿಯಾಯತಿ ದೊರೆಯಲಿದೆ. ಪರಿಹಾರ ಬೇಡ ಎಂದರೆ ಕೈಗಾರಿಕಾ ಪ್ಲಾಟ್ ಅಭಿವೃದ್ಧಿ ಮಾಡಿದ ಮೇಲೆ 1 ಎಕರೆಗೆ ಪರಿಹಾರವಾಗಿ 1600 ಚದರ ಅಡಿ ಜಾಗ ನೀಡಲೂ ಅವಕಾಶವಿದೆ. ಅಲ್ಲದೆ ಕೈಗಾರಿಕೆ ಸ್ಥಾಪನೆಯಾದ ನಂತರ ಭೂಮಿ ಕೊಟ್ಟ ಕುಟುಂಬಕ್ಕೆ ಉದ್ಯೋಗ ಕೊಡುವ ಭರವಸೆ ನೀಡುತ್ತೇವೆ ಎಂದರು. ಶಾಸಕಿ ರೂಪಾಲಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪಿ.ಪಿ.ನಾಯ್ಕ,ಮುಡಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿಮಾ ನಾಯ್ಕ, ಉಪಾಧ್ಯಕ್ಷ ಸುನೀಲ ನಾಯ್ಕ, ಎಸಿ ಜಯಲಕ್ಷ್ಮೀ ರಾಯಕೋಡ ಕೆಐಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಮಮತಾ, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಜಯಂತ ಎಚ್.ವಿ. ನಂದಕಿಶೋರ ನಾಯ್ಕ, ಆರತಿ ಬಾನಾವಳಿ, ಸುರೇಂದ್ರ ಗಾಂವಕರ್, ಸಂಜಯ ಸಾಳುಂಕೆ ವೇದಿಕೆಯಲ್ಲಿದ್ದರು.
…
ಕಣ್ಣೀರು ಹಾಕಿದ ಗ್ರಾಮಸ್ಥ
ಚೆಕ್ ಪಡೆದು ಮಾತನಾಡಿದ ಬಿಕಾಜಿ ಬಾಬು ಗಾಂವಕರ್, 2005 ರಲ್ಲಿ 73 ಎಕರೆಯನ್ನು ಕೆಐಡಿಬಿ ಭೂಸ್ವಾಧೀನ ಮಾಡಿ ತಮ್ಮ ಹೆಸರನ್ನು ತೆಗೆದು ಹಾಕಲಾಗಿತ್ತು. 2010 ರಲ್ಲಿ ಎಕರೆಗೆ 10 ಲಕ್ಷ ರೂ. ಪರಿಹಾರ ಕೊಡಲು ನಿರ್ಣಯಿಸಲಾಗಿತ್ತು. ಆದರೆ, ಸ್ವಾಧೀನವಾಗದೇ ರೈತರು ಅತಂತ್ರರಾಗಿದ್ದರು. ರೂಪಾಲಿ ನಾಯ್ಕ ಅವರು ಜನರ ಅಭಿಪ್ರಾಯ ಪಡೆದು, ಬಡ ರೈತರ ಭಾವನೆ ಅರ್ಥ ಮಾಡಿಕೊಂಡು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿದ್ದರು ಎಂದು ಆನಂದ ಭಾಷ್ಪದೊಂದಿಗೆ ಮಾತನಾಡಿದರು. ಭೂಮಿಯ ಹಲವು ಮೂಲ ಮಾಲೀಕರು ಮೃತಪಟ್ಟಿದ್ದು, ಅವರ ಮಕ್ಕಳಿಗೆ ಸರಳವಾಗಿ ಪರಿಹಾರ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.