ರಾಣೆಬೆನ್ನೂರ ಮಾರುಕಟ್ಟೆಯಲ್ಲಿ ಖುಲ್ಲಾ ಬೀಜ ಮಾರಾಟ ಜೋರು

ranebennur seeds golmal
Published on

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಬೀಜೋತ್ಪಾದನೆಯಲ್ಲಿ ಏಷ್ಯಾ ಖಂಡದಲ್ಲೇ ಹೆಸರುವಾಗಿಯಾದ ರಾಣೆಬೆನ್ನೂರ ಮಾರುಕಟ್ಟೆಯಲ್ಲಿ ಕಳಪೆ ಹಾಗೂ ಖುಲ್ಲಾ ಬೀಜ ಮಾರಾಟ ಜೋರಾಗಿದೆ. ಅಮಾಯಕ ರೈತರಿಗೆ ಖುಲ್ಲಾ ಬೀಜ ನೀಡಿ ಮೋಸ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.


ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ಹೈದರಾಬಾದ್ ಮೂಲದ ಖುಲ್ಲಾ ಹಾಗೂ ಕಳಪೆ ಬೀಜ ಇಲ್ಲಿಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಕಳೆದ ವರ್ಷ ಈ ಮಾರಾಟ ಜಾಲದ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂ. ಮೌಲ್ಯದ ನಕಲಿ ಬೀಜಗಳನ್ನು ವಶಪಡಿಸಿಕೊಂಡಿದ್ದರು.

ಆದರೆ, ಖುಲ್ಲಾ ಬೀಜ ಮಾರಾಟಕ್ಕೆ ಮಾತ್ರ ಸಂಪೂರ್ಣವಾಗಿ ಬ್ರೇಕ್ ಬಿದ್ದಿಲ್ಲ.


ಸಂಸ್ಕರಣೆ ಬೇರೆಡೆ

ಬೀಜೋತ್ಪಾದನೆಯ ಬಹುತೇಕ ಕಂಪನಿಗಳ ಸಂಸ್ಕರಣ ಘಟಕವಿರುವುದು ಹೈದರಾಬಾದ್‌ನಲ್ಲಿ. ಆದರೆ, ಹೈದರಾಬಾದ್ ಅಧಿಕೃತ ಕಂಪನಿಯಿಂದ ಏಜೆಂಟರ ಮೂಲಕ ತಿರಸ್ಕೃತ ಬೀಜಗಳನ್ನು (ಬಿತ್ತನೆಗೆ ಯೋಗ್ಯವಲ್ಲದ ಬೀಜ) ಕಡಿಮೆ ಬೆಲೆಗೆ ಖರೀದಿಸಿ ತಂದು ಅವುಗಳಿಗೆ ಬಣ್ಣ ಸೇರಿಸಿ ವಿವಿಧ ಕಂಪನಿಗಳ ನಕಲಿ ಪ್ಯಾಕೇಟ್‌ಗಳಲ್ಲಿ ಹಾಕಿ ಮಾರಾಟ ಮಾಡಲಾಗುತ್ತಿದೆ.

ರಾಣೆಬೆನ್ನೂರಿನಲ್ಲಿಯೇ ಇಂಥ ಅಕ್ರಮ ದಂಧೆ ಸಕ್ರೀಯವಾಗಿದೆ. ಆದರೆ, ಕಳೆದ ವರ್ಷ ನಡೆದ ಕೃಷಿ ಅಧಿಕಾರಿಗಳ ದಾಳಿಯಿಂದಾಗಿ ಎಚ್ಚೆತ್ತುಕೊಂಡಿರುವ ಅಕ್ರಮ ದಂಧೆಕೋರರು ಈ ಬಾರಿ ನಗರ ಬಿಟ್ಟು ಗ್ರಾಮೀಣ ಭಾಗದಲ್ಲಿ ಕಳಪೆ ಬೀಜದ ಗೋದಾಮುಗಳನ್ನು ಮಾಡಿಕೊಂಡು ಅಲ್ಲಿಂದಲೇ ರೈತರಿಗೆ ಬೀಜ ವಿತರಿಸುತ್ತಿದ್ದಾರೆ ಎಂಬ ದೂರುಗಳಿವೆ.


ಕೃಷಿ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಖುಲ್ಲಾ ಹಾಗೂ ಕಳಪೆ ಬೀಜ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಒತ್ತಾಯವಾಗಿದೆ.


ಮಳೆ ಬಿದ್ದರೆ ದಂಧೆಗೆ ವೇಗ

ಮುಂಗಾರು ಹಂಗಾಮಿಗೆ ಕಳಪೆ ಹಾಗೂ ಖುಲ್ಲಾ ಬೀಜ ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡ ದಂಧೆಕೋರರು, ಮಳೆ ಬೀಳುವುದನ್ನೇ ಕಾಯುತ್ತಿದ್ದಾರೆ. ಮಳೆ ಬಿದ್ದು ರೈತರು ಬಿತ್ತನೆಗೆ ಶುರು ಮಾಡುತ್ತಿದ್ದಂತೆ ಖುಲ್ಲಾ ಬೀಜ ಮಾರಾಟಗಾರರ ಹಾವಳಿ ಅಧಿಕವಾಗಲಿದೆ. ಬೇರೆ ಬೇರೆ ಜಿಲ್ಲೆಯಿಂದ ಬೀಜ ಖರೀದಿಸಲು ಬರುವ ರೈತರನ್ನು ಟಾರ್ಗೆಟ್ ಮಾಡುವ ದಂಧೆಕೋರರು, ಗುಣಮಟ್ಟದ ಹೆಸರು ಹೇಳಿ ಕಳಪೆ ಬೀಜ ಮಾರಾಟ ಮಾಡುತ್ತಾರೆ. ಇಂಥವರ ಬಲೆಗೆ ಬಿದ್ದ ಎಷ್ಟೋ ರೈತರು ಬಿತ್ತಿದ ಬೀಜ ಮೊಳಕೆಯೊಡೆಯದಿದ್ದಾಗ ಬೀಜ ಕೊಟ್ಟ ಅಂಗಡಿಕಾರರ ವಿರುದ್ಧ ಪ್ರತಿಭಟನೆಗೆ ಮುಂದಾದ ಉದಾಹರಣೆಗಳು ಬಹಳಷ್ಟಿವೆ.

ಖುಲ್ಲಾ ಬೀಜ ಮಾರಾಟ ಮಾಡದಂತೆ ಈಗಾಗಲೇ ಎಲ್ಲ ಅಂಗಡಿಕಾರರಿಗೆ ಸೂಚಿಸಿದ್ದೇವೆ. ರೈತರು ಬೀಜ ಖರೀದಿಸಿ ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳಬೇಕು. ಕಳಪೆ ಬೀಜ ಮಾರಾಟ ಮಾಡುತ್ತಿರುವ ಕುರಿತು ಯಾರಾದರೂ ಮಾಹಿತಿ ನೀಡಿದರೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. -- ಎಚ್.ಬಿ. ಗೌಡಪ್ಪಳವರ, ಸಹಾಯಕ ಕೃಷಿ ನಿರ್ದೇಶಕ ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net