

ಕುಮಟಾ: ಖಾದಿ ಎನ್ನುವುದು ನಮ್ಮ ದೇಶದ ಪರಂಪರೆ ಹಾಗೂ ಸ್ವಾಭಿಮಾನದ ಬಟ್ಟೆಯಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶದ ಮಹಾನ್ ನಾಯಕರಾದ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜನ್ಮದಿನದ ಪ್ರಯುಕ್ತ ಬಿಜೆಪಿ ಕಾರ್ಯಾಲಯದಲ್ಲಿ ಖಾದಿ ಮೇಳ ಹಮ್ಮಿಕೊಂಡಿದ್ದೇವೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.
ಬಿಜೆಪಿ ಕುಮಟಾ ಮಂಡಲದ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾತ್ಮಾಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಮತ್ತು ಖಾದಿಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ವರ್ಷವೂ ಇಲ್ಲಿ ಹಮ್ಮಿಕೊಂಡಿದ್ದ ಖಾದಿ ಮೇಳಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೊರ ಜಿಲ್ಲೆಗಳಿಂದ ಖಾದಿ ವ್ಯಾಪಾರಿಗಳು ಇಲ್ಲಿ ಬಂದು ಮಳಿಗೆ ಹಾಕಿದ್ದಾರೆ. ಗುಣಮಟ್ಟದ ಖಾದಿ ಬಟ್ಟೆಗಳು ಇಲ್ಲಿವೆ. ಸಾರ್ವಜನಿಕರು ಭೇಟಿ ಕೊಟ್ಟು ವೀಕ್ಷಿಸಿ ಖರೀದಿ ಮಾಡುವ ಮೂಲಕ ಖಾದಿ ಮೇಳವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ವತಿಯಿಂದ ದೇಶಾದ್ಯಂತ ಹಲವಾರು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಅಕ್ಟೋಬರ್ 5ರವರೆಗೆ ಖಾದಿ ಮೇಳ ನಡೆಯಲಿದೆ. ಖಾದಿ ಬಟ್ಟೆ ಮಾತ್ರವಲ್ಲದೇ ಸ್ವದೇಶಿ ಗೃಹಪಯೋಗಿ ವಸ್ತುಗಳು, ಮನೆಯಲ್ಲಿ ತಯಾರಿಸಿದ ಸ್ವಾದಿಷ್ಟ ಖಾದ್ಯಗಳು, ತರಕಾರಿ ಇನ್ನಿತರ ಗಿಡಗಳ ಬೀಜಗಳು ಕೂಡಾ ಮೇಳದಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಜಿಲ್ಲಾ ಯುವಮೋರ್ಚಾ ಪ್ರಭಾರಿ ಎಂ.ಜಿ. ಭಟ್, ಸೇವಾ ಪಾಕ್ಷಿಕದ ಮಂಡಲ ಪ್ರಮುಖ ಡಾ. ಜಿ.ಜಿ. ಹೆಗಡೆ, ಮಂಡಲ ಪ್ರಭಾರಿ ಶಿವಾನಿ ಶಾಂತಾರಾಮ, ಪ್ರಮುಖರಾದ ಗಜಾನನ ಗುನಗಾ, ಮೋಹಿನಿ ಗೌಡ, ಜಗದೀಶ ಭಟ್, ವಿಶ್ವನಾಥ ನಾಯ್ಕ ಇನ್ನಿತರರು ಇದ್ದರು.