ಲಾರಿ ಚಾಲಕನ ಕೊಂದು 13 ಟನ್ ತಾಮ್ರ ದರೋಡೆ ಮಾಡಿದ ಖದೀಮರು

HVR MURDER
Published on

ಹಾವೇರಿ: ಮೀರಜ್‌ನಿಂದ ಚೆನ್ನೈಗೆ ಹೊರಟಿದ್ದ ಲಾರಿಯನ್ನು ಅಡ್ಡಗಟ್ಟಿ ಚಾಲಕನನ್ನು ಆಯುಧದಿಂದ ಹೊಡೆದು ಕೊಂದು ಲಾರಿಯಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 13 ಟನ್ ತಾಮ್ರ ದೋಚಿಕೊಂಡು ಪರಾರಿಯಾದ ಘಟನೆ ಇಲ್ಲಿನ ಹಾವೇರಿ- ರಾಣೆಬೆನ್ನೂರ ಬೈಪಾಸ್‌ನ ಪುನೀತ್ ಡಾಬಾ ಬಳಿ ನಡೆದಿದೆ.


ಮಹಾರಾಷ್ಟ್ರ ಸೊಲ್ಲಾಪುರದ ನಿವಾಸಿ ಗೋವಿಂದ ನಾರಾಯಣ ಖಂಡೇಕಾರ (40) ಮೃತಪಟ್ಟ ಚಾಲಕ.

ಮಹಾರಾಷ್ಟ್ರ ಸಾಂಗ್ಲಿ ಮೂಲದ ಲಾರಿಯ ಚಾಲಕನಾಗಿದ್ದ ಗೋವಿಂದ, ಮೀರಜ್‌ನಿಂದ ತಾಮ್ರ ತುಂಬಿಕೊಂಡು ಚೆನ್ನೈ ಕಡೆಗೆ ಹೊರಟಿದ್ದ. ಗುರುವಾರ ಮಧ್ಯಾಹ್ನ ಲಾರಿ ಅಡ್ಡಗಟ್ಟಿದ ದರೋಡೆಕೋರರು ಯಾವುದೋ ಆಯುಧದಿಂದ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಅಸ್ವಸ್ತನಾಗಿದ್ದ ಗೋವಿಂದನನ್ನು ಪುನೀತ್ ಡಾಬಾ ಬಳಿ ರಸ್ತೆ ಬದಿ ಎಸೆದು ಲಾರಿ ತೆಗೆದುಕೊಂಡು ಪರಾರಿಯಾಗಿದ್ದಾರೆ.


ಲಾರಿಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಬೇರೆಡೆ ಸಾಗಿಸಿ ಖಾಲಿ ಲಾರಿಯನ್ನು ತಂದು ಹಾನಗಲ್ಲ ಮೇಲ್ಸೇತುವೆ ಬಳಿ ಬಿಟ್ಟು ಪರಾರಿಯಾಗಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಶಹರ ಠಾಣೆ ಇನ್‌ಸ್ಪೆಕ್ಟರ್ ಸುರೇಶ ಸಗರಿ ಹಾಗೂ ಸಿಬ್ಬಂದಿ ಗೋವಿಂದನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆಂದು ಕಿಮ್ಸ್‌ಗೆ ರವಾನಿಸಿದಾಗ, ಚಿಕಿತ್ಸೆಗೆ ಸ್ಪಂದಿಸದೇ ಆತ ರಾತ್ರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಮಹಾರಾಷ್ಟ್ರದಿಂದ ಗೋವಿಂದ ಪತ್ನಿ ಹಾಗೂ ಕುಟುಂಬದವರು ಹುಬ್ಬಳ್ಳಿಗೆ ಆಗಮಿಸಿದ್ದು, ಕಿಮ್ಸ್‌ನಲ್ಲಿ ಗೋವಿಂದನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕ್ಲೀನರ್ ಕೃತ್ಯ ಶಂಕೆ ?

ಗೋವಿಂದ ಲಾರಿ ಚಲಾಯಿಸುವಾಗ ಜತೆಯಲ್ಲಿ ಕ್ಲೀನರ್ ಇದ್ದನಾ ? ಇಲ್ಲವೇ ? ಎಂಬುದು ಗೊತ್ತಾಗಬೇಕಿದೆ. ಸಾಮಾನ್ಯವಾಗಿ ಲಾಂಗ್ ರೂಟ್ ಲಾರಿಗಳಲ್ಲಿ ಕ್ಲೀನರ್ ಇದ್ದೇ ಇರುತ್ತಾರೆ. ಒಂದು ವೇಳೆ ಕ್ಲೀನರ್ ಇದ್ದ ಎಂಬುದಾದರೆ ಆತನೇ ಈ ಸಂಚು ರೂಪಿಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಬಗ್ಗೆ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಲಾರಿ ಮಾಲೀಕನನ್ನು ವಿಚಾರಿಸಿದರೆ ವಿಷಯ ಬಹಿರಂಗವಾಗಲಿದೆ. ಈ ಕುರಿತು ಪೊಲೀಸರಿಂದ ತನಿಖೆ ಆರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net