

ಪುತ್ತೂರು ಗ್ರಾಮಾಂತರ: ಕೆಲ ವರ್ಷಗಳಿಂದ ತೀರಾ ಹದಗೆಟ್ಟು ಸಂಚಾರ ಸಮಸ್ಯೆ ಎದುರಾಗಿದ್ದ ಕೆಯ್ಯೂರು- ಇಳಂತಾಜೆ - ಕೌಡಿಚ್ಚಾರು ಗ್ರಾಮೀಣ ಸಂಪರ್ಕ ರಸ್ತೆಗೆ ಕೊನೆಗೂ ಅಭಿವೃದ್ಧಿ ಯೋಗ ಕೂಡಿಬಂದಿದೆ. ರಸ್ತೆಯ ಅಭಿವೃದ್ಧಿ ಕಾರ್ಯ 5 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಪುತ್ತೂರು- ಬೆಳ್ಳಾರೆ ರಸ್ತೆಯ ಕೆಯ್ಯೂರಿನಿಂದ ಕಣಿಯಾರು- ಇಳಂತಾಜೆ ಮೂಲಕವಾಗಿ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಕೌಡಿಚ್ಚಾರಿನಲ್ಲಿ ಸಂಪರ್ಕ ಕಲ್ಪಿಸುವ ಕೆಯ್ಯೂರು- ಇಳಂತಾಜೆ- ಕೌಡಿಚ್ಚಾರು ಗ್ರಾಮೀಣ ರಸ್ತೆ ತೀರಾ ಹದಗೆಟ್ಟಿತ್ತು. ಕಣಿಯಾರು, ಇಳಂತಾಜೆ ಭಾಗದಲ್ಲಿ ರಸ್ತೆ ಡಾಂಬರು ಸಂಪೂರ್ಣವಾಗಿ ಎದ್ದು ಹೋಗಿ ಹೊಂಡ ಗುಂಡಿಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿತ್ತು.
ಇದೀಗ ರಸ್ತೆ ವಿಸ್ತರಣೆಯೊಂದಿಗೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸಲು ಪ್ರಯತ್ನಿಸಿದ್ದ ಇಳಂತಾಜೆ ಸಂತೋಷ್‌ಕುಮಾರ್ ರೈ ಮತ್ತು ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೈನ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ರಸ್ತೆ ಕಾಂಕ್ರೀಟ್ ಕಾಮಗಾರಿ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.