ಮಾದರಿ ಕೃಷಿ ಅನುಸರಿಸಿದ ಕೇತೋಹಳ್ಳಿ ರೈತ ಸತೀಶ್

Rmgm-Ph-01-Negila Yogi- Story Photo Pappaya Thota-9-3-2024
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಬರಗಾಲ, ಬೆಳೆಗೆ ಉತ್ತಮ ಬೆಲೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಹೊತ್ತಿನಲ್ಲಿ ಇರುವ ಭೂಮಿಯಲ್ಲೇ ಲಾಭದಾಯಕ ಬೆಳೆ ಬೆಳೆದು ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ ಕೇತೋಹಳ್ಳಿಯ ರೈತ ಸತೀಶ್. 


ಆಧುನಿಕ ಕೃಷಿ ಪದ್ಧತಿ ಮೂಲಕ ಹೆಚ್ಚು ಲಾಭ ತರುವ ಅಪರೂಪದ ಬೆಳೆಗಳನ್ನು ಬೆಳೆದು ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಂಡು ಯಶಸ್ಸಿನ ಹಾದಿ ಹಿಡಿದ ಸಾಧಕ 12 ಎಕರೆ ಜಮೀನಿನಲ್ಲಿ ಅರಣ್ಯ ಕೃಷಿ, ನುಗ್ಗೆ, ಟೊಮ್ಯಾಟೊ ಮತ್ತಿತರ ತರಕಾರಿ, ಹೈನುಗಾರಿಕೆ, ಹೂವಿನ ಬೆಳೆ, ತೆಂಗು, ರಾಗಿ, ಭತ್ತ, ಪಪ್ಪಾಯ, ತೋಟಗಾರಿಕೆ ಬೆಳೆಗಳು ಸೇರಿದಂತೆ ವಿವಿಧ ಹತ್ತಾರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. 


ಇಡೀ ಕುಟುಂಬವೇ ಕೃಷಿಗೆ ಬೆನ್ನೆಲುಬಾಗಿ ನಿಂತಿದ್ದು, ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ನೀರಾವರಿಗೆ ಕೊರತೆಯಾಗದಂತೆ ಹನಿ ನೀರಾವರಿ ಅಳವಡಿಸಿಕೊಂಡು ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರಕ್ಕೆ ಒತ್ತುಕೊಟ್ಟು ರಾಸಾಯನಿಕ ಗೊಬ್ಬರ ಕಡಿಮೆಗೊಳಿಸಿ ಕೃಷಿಯಲ್ಲಿ ಮುನ್ನಡೆಯುತ್ತಿದ್ದಾರೆ.

ಜೇನು ಕೃಷಿ

ತರಕಾರಿ, ಹೂವು, ತೋಟದ ಬೆಳೆ ಜತೆಗೆ ಕಳೆದ 8 ವರ್ಷಗಳಿಂದ ಜೇನು ಕೃಷಿ ಮಾಡುತ್ತಿದ್ದಾರೆ. ಒಂದು ಪೆಟ್ಟಿಗೆಯಿಂದ ಪ್ರಾರಂಭವಾದ ಜೇನುಕೃಷಿ ಇಂದು ಹಲವು ಪೆಟ್ಟಿಗೆಗೆ ವಿಸ್ತಾರವಾಗಿದೆ.

ಹೈನುಗಾರಿಕೆ: ಕೃಷಿ ಜತೆಗೆ ಉಪ ಕಸುಬಾಗಿ ಹೈನುಗಾರಿಕೆ ಮಾಡುತ್ತಿದ್ದು, ಜಮೀನಿನಲ್ಲಿ ರಾಸುಗಳಿಗೆ ಬೇಕಾದ ಜೋಳ, ಸೀಮೇಹುಲ್ಲು ಬೆಳೆದು ಹೆಚ್ಚಿನ ಹಾಲು ಕರೆಯುವ ವಿವಿಧ ತಳಿಯ ಹಸುಗಳನ್ನು ಸಾಕಣೆ ಮಾಡಿರುವ ಸತೀಶ್ ಅವರು ಆಧುನಿಕ ಪದ್ಧತಿ ಅನುಸರಿಸಿ ಹಾಲು ಕರೆಯುವ ಯಂತ್ರ, ಮೇವು ಕಟಾವು ಯಂತ್ರ ಅಳವಡಿಸಿಕೊಂಡು ನಿತ್ಯ 40 ಲೀಟರ್ ಹಾಲು ಉತ್ಪಾದನೆ ಮಾಡಿ ಹೈನುಗಾರಿಕೆಯಲ್ಲೂ ಲಾಭದತ್ತ ಹೆಜ್ಜೆ ಹಾಕಿದ್ದಾರೆ.

ತರಕಾರಿ: ತರಕಾರಿ ಬೆಳೆ ಬೆಳೆಯಲು ಪ್ರಾರಂಭಿಸುವ ಮೂಲಕ ಟೊಮ್ಯಾಟೊ, ಬದನೆ, ಮೆಣಸಿನಕಾಯಿ ಆಯಾ ಋತುಮಾನಕ್ಕೆ ತಕ್ಕಂತೆ ತರಕಾರಿ ಬೆಳೆದು ಲಾಭ ಕಂಡುಕೊಂಡಿದ್ದಾರೆ. ಯಾವುದೇ ಬಾಡಿಗೆ ವಾಹನ ಹಿಡಿಯದೆ ತಮ್ಮದೇ ಟ್ರ್ಯಾಕ್ಟರ್‌ನಲ್ಲಿ ರಾಮನಗರದ ಮಾರುಕಟ್ಟೆಗೆ ತಂದು ಮಾರಾಟ ಮಾಡಿ ಹೋಗುತ್ತಾರೆ.


ವಿಶೇಷ ತಳಿ ಮಾವು


ಜಿಲ್ಲೆಯಲ್ಲಿ ಪ್ರಮುಖವಾಗಿ ಬಾದಾಮಿ, ಸೆಂದೂರ, ರಸಪೂರಿ ಮಲಗೋಬ, ಮಲ್ಲಿಕಾ, ಮಾವಿನ ಹಣ್ಣುಗಳನ್ನು ಮಾತ್ರ ಬೆಳೆಯಲಾಗುತ್ತೆ. ಆದರೆ ಸತೀಶ್ ಅವರು ವಿಶೇಷವಾಗಿ ಕಾಲಪಾಡ್ ಮತ್ತು ಬೈಗಾನ್ ಪಲ್ಲಿ, ನೀಲಂ. ಬೆಳೆದಿದ್ದು ಸುಮಾರು 6 ಎಕರೆ ವಿಸ್ತೀರ್ಣದಲ್ಲಿ ಮಾವು ಬೆಳೆದಿದ್ದಾರೆ. ರಾಸಾಯನಿಕ ಬಳಸದೆ ನೈಜವಾಗಿ ಹಣ್ಣುಮಾಡಿ ಉತ್ತಮ ಪ್ಯಾಕ್ ಮಾಡಿ, ಯಾವ ಮಧ್ಯವರ್ತಿ ಇಲ್ಲದೆ ತೆನೆ ರೈತ ಉತ್ಪಾದಕ ಕಂಪನಿ ಮುಖಾಂತರ ಮಾರಾಟ ಮಾಡುವ ವ್ಯವಸ್ಥೆ ಕಂಡುಕೊಂಡಿದ್ದಾರೆ.


ಸಾವಯವ ಕೃಷಿ

ರಾಸಾಯನಿಕ ಬಳಕೆ ಕಡಿಮೆ ಮಾಡಿರುವ ಇವರು ಜಮೀನಿನಲ್ಲೇ ಎರೆಹುಳುತೊಟ್ಟಿ, ಸಾವಯವ ಗೊಬ್ಬರ ಘಟಕ, ಬಯೋ ಡೈಜೆಸ್ಟರ್ ಘಟಕ ಮಾಡಿದ್ದು, ಗೊಬ್ಬರ ಸ್ವತಃ ಉತ್ಪಾದಿಸಿ ಫಸಲಿಗೆ ಸಾವಯವ ಗೊಬ್ಬರ, ಕೊಟ್ಟಿಗೆ ಗೊಬ್ಬರ ನೀಡಿ ಬೆಳೆ ಬೆಳೆಯಲಾರಂಭಿಸಿದ್ದಾರೆ. ಇದರಿಂದ ಫಸಲಿಗೆ ರೋಗಭಾದೆ ಕಡಿಮೆ ಎನ್ನುತ್ತಾರೆ ಸತೀಶ್.

ಆನೆ ಕಾಟ

ಹಂದಿಗೊಂದಿ ಅರಣ್ಯ ಪ್ರದೇಶಕ್ಕೆ ಬರುವ ಆನೆಗಳು ಇವರ ಜಮೀನಿಗೆ ಆಗಿಂದಾಗ್ಗೆ ಲಗ್ಗೆ ಇಟ್ಟು ಬಾಳೆ ಸೇರಿದಂತೆ ಹಲವು ತೋಟದ ಬೆಳೆಗಳನ್ನು ಹಾನಿ ಮಾಡುತ್ತಿರುವ ಕಾರಣ ತೋಟದ ಬೆಳೆಗಳನ್ನು ಬೆಳೆಯಲು ಕಷ್ಟಕರವಾಗಿದೆ ಎನ್ನುತ್ತಾರೆ ರೈತ ಸತೀಶ್.

ಕೃಷಿ ಯಾವತ್ತೂ ನಮಗೆ ಹಿಮ್ಮುಖವಾಗುವಂತೆ ಮಾಡಿಲ್ಲ. ಕೃಷಿ ಲಾಭದಾಯಕವೇ ಆಗಿದೆ. ಆದರೆ ಇತ್ತೀಚೆಗೆ ಆನೆ ಕಾಟದಿಂದ ಕೃಷಿ ಚಟುವಟಿಕೆಗೆ ತೊಡಕಾಗುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಇದ್ದ ಸಮಯದಲ್ಲಿ ಅಂದಿನ ತೋಟಗಾರಿಕೆ ಮಂತ್ರಿ ಶಂಕರ್ ಜತೆಗೆ ಅಧಿಕಾರಿ ತುಷಾರ್ ಗಿರಿನಾಥ್ ಭೇಟಿ ನೀಡಿ ನಮ್ಮ ಕೃಷಿ ಕಂಡು ಮೆಚ್ಚುಗೆ ಸೂಚಿಸಿದ್ದರು.

ಸತೀಶ್, ರೈತ, ಕೇತೋಹಳ್ಳಿ.

ಸತೀಶ್ ಪ್ರಗತಿಪರ ಮಾದರಿ ಕೃಷಿಕರಾಗಿದ್ದು, ಹೊಸ ಹೊಸ ಬೆಳೆಯ ಬಗ್ಗೆ ಅನ್ವೇಷಣೆ ಮಾಡುತ್ತಿರುತ್ತಾರೆ. ಮಿಶ್ರ ಬೇಸಾಯ ಸೇರಿ ಹತ್ತಾರು ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತೋಟಗಾರಿಕೆ ಇಲಾಖೆ ಅವರ ತೋಟದ ಬೆಳೆಗಳಿಗೆ ಪೂರಕ ಸರ್ಕಾರದಿಂದ ಸಿಗುವ ನೆರವು ಮತ್ತು ಕಾಲಕಾಲಕ್ಕೆ ಇಲಾಖೆಯಿಂದ ಮಾಹಿತಿ ನೀಡಿ ಪ್ರೋತ್ಸಾಹಿಸುತ್ತಿದೆ.

ರವಿ, ತೋಟಗಾರಿಕೆ ಅಧಿಕಾರಿ, ಕಸಬಾ, ರಾಮನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net