

ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಗ್ರಾಮ ದೇವತೆ ಕೆಸ್ತೂರು ಮಾರಮ್ಮನ ಹಾಲರವಿ ಉತ್ಸವ ವಿಜೃಂಭಣೆಯಿಂದ ಜರುಗಿತು.
ಸೋಮವಾರ ಬೆಳಗ್ಗೆ ನಾಡಗೌಡರು, ಗೌಡರು, ಎಲ್ಲ ಕೋಮಿನ ಯಜಮಾನರ ನೇತೃತ್ವದಲ್ಲಿ ದೇವಸ್ಥಾನ ಮುಂಭಾಗವಿರುವ ಬಾವಿಕೆರೆಯಲ್ಲಿ ಜಲಪೂಜೆ ಮಾಡಿ ಹಬ್ಬಕ್ಕೆ ಚಾಲನೆ ನೀಡಿದರು.
ಎಲ್ಲ ದೇವಾಲಯಗಳನ್ನು ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ರಾತ್ರಿ 10ರ ನಂತರ ಹಾಲರವಿ ಉತ್ಸವವು ಪ್ರಾರಂಭಗೊಂಡಿತು. ಕೆಸ್ತೂರು ಮಾರಮ್ಮನ ಉತ್ಸವ ಮೂರ್ತಿಯನ್ನು ಬಾವಿಕೆರೆಯಲ್ಲಿ ಪೂಜೆ, ಹವನ ಮಾಡಿ ಬೃಹತ್ ಕುರ್ಜಿನೊಳಗೆ ಗ್ರಾಮದೇವತೆ ಕೆಸ್ತೂರು ಮಾರಮ್ಮನ ಉತ್ಸವ ಮೂರ್ತಿಯನ್ನು ಇರಿಸಿ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯಲ್ಲಿ ಕಳಸ ಹೊತ್ತ ಮಹಿಳೆಯರು, ಸತ್ತಿಗೆ ಸೂರಪಾನಿ, ಕೊಂಬು ಕಹಳೆ, ಪಂಜು, ಮಂಗಳವಾದ್ಯಗಳೊಂದಿಗೆ ಕುರ್ಜು ಬಸವೇಶ್ವರ ಗುಡಿಗೆ ಸಾಗಿ ನಂತರ ವಾಪಸ್ ಗ್ರಾಮದ ವಿವಿಧ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ರಾತ್ರಿ 3 ಗಂಟೆಯವರೆಗೂ ಹಾಲರವಿ ಉತ್ಸವ ನಡೆಯಿತು.
ಗ್ರಾಮದೇವತೆಗೆ ಗ್ರಾಮಸ್ಥರು ದಾರಿಯುದ್ದಕ್ಕೂ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು. ಐದು ವರ್ಷದ ನಂತರ ಜರುಗಿದ ಹಬ್ಬವನ್ನು ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಕಣ್ತುಂಬಿಕೊಂಡರು.