

ಎನ್.ವಿ.ವೆಂಕಟೇಶ್, ಗುಡಿಬಂಡೆ
ಕೋಳಿ ಮಾಂಸ ಮಾರಾಟ ಮಾಡುವ ಅಂಗಡಿಗಳ ಮಾಲೀಕರು ಕೋಳಿ ತ್ಯಾಜ್ಯವನ್ನು ಕೆರೆಗಳ ಪಕ್ಕದಲ್ಲಿ ಸುರಿಯುತ್ತಿರುವುದರಿಂದ ಈಡೀ ಪರಿಸರ ದುರ್ವಾಸನೆ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ಎದುರಾಗಿದೆ.
ಹೌದು! ಗುಡಿಬಂಡೆಯ ಹೃದಯ ಭಾಗದಲ್ಲಿರುವ ಹಾಗೂ ಉಲ್ಲೋಡು ಗ್ರಾಪಂ ವ್ಯಾಪ್ತಿಯ ರಾಮಪ್ಪ ಕೆರೆ ಪಕ್ಕದಲ್ಲಿ ಕೋಳಿ ತ್ಯಾಜ್ಯ ಸುರಿಯಲಾಗುತ್ತಿದೆ. ಈ ತ್ಯಾಜ್ಯವನ್ನು ಸುರಿಯುವವರ ವಿರುದ್ಧ ಉಲ್ಲೋಡು ಗ್ರಾಪಂ ಅಧಿಕಾರಿಗಳು ಕಾನೂನು ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಸರ್ಕಾರಿ ಆದೇಶಕ್ಕೆ ಕಿಮ್ಮತ್ತಿಲ್ಲ
ಚಿಕನ್ ಅಂಗಡಿಗಳಿಗೆ ಪರವಾನಗಿ ನೀಡುವಾಗಲೇ ಕೆಲ ಷರತ್ತು ವಿಧಿಸಲಾಗುತ್ತದೆ. ವ್ಯಾಪಾರ ಆರಂಭಿಸುವಾಗ ಎಲ್ಲ ಷರತ್ತುಗಳನ್ನು ಒಪ್ಪಿಕೊಳ್ಳುವ ಮಾಲೀಕರು ನಂತರ ಯಾವುದನ್ನೂ ಪಾಲಿಸದೆ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿಯುತ್ತ ನಿಯಮ ಉಲ್ಲಂಘಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಆದೇಶ ಉಲ್ಲಂಸುವವರಿಗೆ ನೋಟಿಸ್ ನೀಡಿ ಕ್ರಮ ವಹಿಸಬೇಕಾಗಿದೆ.
ರಾತ್ರೋರಾತ್ರಿ ಕೆರೆ ಸೇರುತ್ತಿರುವ ತ್ಯಾಜ್ಯ
ಚಿಕನ್ ಸೆಂಟರ್ ಮಾಲೀಕರು ರಾತ್ರಿ ಹೊತ್ತಿನಲ್ಲಿ ಕೋಳಿ ತ್ಯಾಜ್ಯವನ್ನು ಮೂಟೆ ಕಟ್ಟಿಕೊಂಡು ದ್ವಿಚಕ್ರ ವಾಹನದಲ್ಲಿ ತಂದು ಹಾಕುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಎದುರಾಗಿದೆ. ತ್ಯಾಜ್ಯವನ್ನು ವೈಜ್ಞಾನಿಕವಾಗಿ ಬೇರೆ ಕಡೆ ವಿಲೇವಾರಿ ಮಾಡದೆ ಜನಜಂಗುಳಿ ಪ್ರದೇಶದಲ್ಲಿ ಹಾಕುವುದರಿಂದ ರೋಗರುಜಿನಗಳಿಗೆ ಕಾರಣವಾಗುತ್ತಿದೆ.
ನಾಯಿಗಳ ಹಾವಳಿ
ಕೋಳಿ ತ್ಯಾಜ್ಯ ತಿನ್ನಲು ಬೀದಿ ನಾಯಿಗಳ ಹಿಂಡು ಸೇರಿರುತ್ತವೆ. ಒಮ್ಮೊಮ್ಮೆ ಈ ನಾಯಿಗಳು ತ್ಯಾಜ್ಯದ ಮೂಟೆಗಳನ್ನು ರಸ್ತೆಗೆ ಎಳೆದು ತಂದು ಹರಡುತ್ತವೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಜತೆಗೆ ದಾರಿಹೋಕರ ಮೇಲೆ ನಾಯಿಗಳು ಎರಗುತ್ತಿರುವುದರಿಂದ ಒಂಟಿಯಾಗಿ ಸಂಚರಿಸಲು ಜನರು ಹೆದರುವಂತಾಗಿದೆ.
ವಾಯು ವಿಹಾರಿಗಳಿಗೂ ಕಿರಿಕಿರಿ
ಪ್ರತಿದಿನ ಗುಡಿಬಂಡೆ ಪಟ್ಟಣದ ಜನತೆ ಬೆಳಗ್ಗೆಯೇ ವಾಯುವಿಹಾರಕ್ಕಾಗಿ ರಾಮಪ್ಪ ಕೆರೆವರೆಗೂ ಹೋಗಿ ಬರುತ್ತಾರೆ. ಸ್ವಲ್ಪ ಸಮಯ ವ್ಯಾಯಾಮ ಮಾಡುತ್ತಾರೆ. ಆದರೆ, ಕೋಳಿ ತ್ಯಾಜ್ಯದಿಂದ ಬರುವ ದುರ್ವಾಸನೆಯಿಂದಾಗಿ ವ್ಯಾಯಾಮ ಮಾಡಲು ಆಗುತ್ತಿಲ್ಲ ಎನ್ನುತ್ತಾರೆ ವಾಯುವಿಹಾರಿಗಳು. ಜತೆಗೆ ಕೂಡಲೇ ತ್ಯಾಜ್ಯ ಸುರಿಯುವುದಕ್ಕೆ ಬ್ರೇಕ್ ಹಾಕುವಂತೆ ಒತ್ತಾಯಿಸಿದ್ದಾರೆ.
ಕೋಳಿ ತ್ಯಾಜ್ಯ ಸುರಿಯುತ್ತಿರುವುದರಿಂದ ದುರ್ವಾಸನೆ ಬರುತ್ತಿದೆ. ಜತೆಗೆ ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ಕೂಡಲೇ ಉಲ್ಲೋಡು ಗ್ರಾಪಂ ಅಧಿಕಾರಿಗಳು ತ್ಯಾಜ್ಯ ಸುರಿಯುತ್ತಿರುವವರನ್ನು ಪತ್ತೆಹಚ್ಚಿ ದಂಡ ವಿಧಿಸಬೇಕು. ಮತ್ತೆ ಸುರಿಯದಂತೆ ಎಚ್ಚರ ವಹಿಸಬೆಕಿದೆ.
- ಮಂಜುನಾಥ್, ಉಲ್ಲೋಡು
ತ್ಯಾಜ್ಯ ಸುರಿಯುತ್ತಿರುವುದು ಇದುವರೆಗೆ ಗಮನಕ್ಕೆ ಬಂದಿರಲಿಲ್ಲ. ಕೂಡಲೇ ಸ್ಥಳ ಪರಿಶೀಲನೆ ಮಾಡಿ, ಕೆರೆಗೆ ತ್ಯಾಜ್ಯ ಹಾಕುವವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ.
- ಗೌಸ್‌ಪೀರ್, ಪಿಡಿಒ, ಉಲ್ಲೋಡು ಗ್ರಾಪಂ