ಕೆರೆಮನೆ ರಾಷ್ಟ್ರೀಯ ಪ್ರಶಸ್ತಿಗಳು ಪ್ರಕಟ

Yakshagana
Published on

ಹೊನ್ನಾವರ: ತಾಲೂಕಿನ ಗುಣವಂತೆಯಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಆಶ್ರಯದಲ್ಲಿ `ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಮಾರ್ಚ 16 ರಿಂದ 20 ರವರೆಗೆ ನಡೆಯಲಿದೆ.
ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಗೆ ಬಹುಮುಖ ವ್ಯಕ್ತಿತ್ವದ ವಿದ್ವಾಂಸ ಶತವಧಾನಿ ಡಾ. ಆರ್. ಗಣೇಶ ಹಾಗೂ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಗೆ ಪ್ರಸಿದ್ಧ ಯಕ್ಷಗಾನದ ಚಿಂತಕ, ಅರ್ಥಧಾರಿ ಲಕ್ಷ್ಮೀನಾರಾಯಣ ಸಾಮಗ ಆಯ್ಕೆಯಾಗಿದ್ದಾರೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ: ಬಹುಮುಖ ವ್ಯಕ್ತಿತ್ವದ ವಿದ್ವಾಂಸ ಶತವಧಾನಿ ಡಾ. ಆರ್. ಗಣೇಶ ಅವರನ್ನು ಪ್ರತಿಷ್ಠಿತ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ 25 ಸಾವಿರ ರೂ. ಮೊತ್ತ, ಪ್ರಶಸ್ತಿ ಪತ್ರ ಮತ್ತು ಇತರ ಗೌರವಗಳನ್ನು ಒಳಗೊಂಡಿದ್ದು ಮಾರ್ಚ್ 16 ರಂದು ಗುಣವಂತೆಯ ಯಕ್ಷಾಂಗಣದಲ್ಲಿ ನಡೆಯುವ ಮೊದಲ ದಿನದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಡಾ. ಆರ್. ಗಣೇಶ ಅವರು ಅಲಂಕಾರ, ಛಂದಸ್ಸು, ವೇದ-ವೇದಾಂತ, ವ್ಯಾಕರಣ, ಧರ್ಮಶಾಸ್ತç, ನೃತ್ಯ-ನಾಟಕ, ಯಕ್ಷಗಾನ, ಚಿತ್ರ-ಶಿಲ್ಪ ಸಂಗೀತಾದಿ ಕ್ಷೇತ್ರಗಳಲ್ಲಿ ಸಾಕಷ್ಟು ದುಡಿದಿದ್ದಾರೆ. ಭಾರತೀಯ ವಿಜ್ಞಾನ-ತಂತ್ರಜ್ಞಾನ, ಇತಿಹಾಸ, ಮೌಲ್ಯಮೀಮಾಂಸೆ ಸೌಂದರ್ಯ ಮೀಮಾಂಸೆಗಳಲ್ಲಿಯೂ ಪರಿಶ್ರಮಿಸಿದ್ದಾರೆ. ಎಂಟು ಭಾಷೆಗಳಲ್ಲಿ ಕವಿತೆಗಳನ್ನು ರಚಿಸಬಲ್ಲ ಗಣೇಶ್ ಅವರು ಅಷ್ಟಾವಧಾನ, ಶತಾವಧಾನ, ಕಾವ್ಯ-ಚಿತ್ರ ಮೊದಲಾದ ಸಾಹಿತ್ಯಕ ಕ್ರೀಡೆಗಳಿಂದ ಪ್ರಸಿದ್ಧರಾಗಿದ್ದಾರೆ.
ಕೆರೆಮನೆಗಜಾನನ ಹೆಗಡೆ ಪ್ರಶಸ್ತಿ: ಪ್ರಸಿದ್ಧ ಯಕ್ಷಗಾನದ ಚಿಂತಕರು, ವಿದ್ವಾಂಸರು, ಅರ್ಥಧಾರಿಗಳಾದ ಲಕ್ಷ್ಮೀ ನಾರಾಯಣ ಸಾಮಗ ಇವರಿಗೆ `ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 15 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಶಾಲು ಇತ್ಯಾದಿ ಗೌರವಗಳನ್ನು ಹೊಂದಿದೆ. ಮಾರ್ಚ್ 17 ರಂದು ನಡೆಯುವ ಎರಡನೇ ದಿನದ ಸಭಾಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ನೆರವೇರಲಿದೆ. ಲಕ್ಷ್ಮೀ ನಾರಾಯಣ ಸಾಮಗ ಅವರು ಹವ್ಯಾಸ ಯಕ್ಷಗಾನ ಕಲಾವಿದನಾಗಿ ಬಡಗು ಮತ್ತು ತೆಂಕುತಿಟ್ಟುಗಳಲ್ಲಿ ಪಾತ್ರಧಾರಿಯಾಗಿ ಸುಮಾರು 50 ವರ್ಷಗಳ ಕಲಾನುಭವ ಹೊಂದಿದ್ದಾರೆ. ಎರಡು ಶೈಲಿಗಳ ಆಟ ಮತ್ತು ತಾಳಮದ್ದಲೆಗಳಲ್ಲೂ ಕಲಾವಿದರಾಗಿ ಜನರಿಂದ ಮನ್ನಣೆ ಪಡೆದಿದ್ದಾರೆ. ಯಕ್ಷಗಾನದ ಜೊತೆಗೆ ನಾಟಕ, ನೃತ್ಯರೂಪಕ, ಗಮಕ ಕಾವ್ಯ ವ್ಯಾಖ್ಯಾನ ಇತ್ಯಾದಿಗಳಲ್ಲಿ ಸಾಕಷ್ಟು ಅನುಭವ ಹೊಂದಿದ ಇವರು ಹಲವಾರು ಯಕ್ಷಗಾನ ಶಿಬಿರ, ಸಂಕೀರ್ಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಬಂಧ ಮಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net