

ಪಾಂಡವಪುರ: ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಕಾರ್ಯಕ್ರಮದಡಿ ಗ್ರಾಮಠಾಣಾ ವ್ಯಾಪ್ತಿಯನ್ನು ವಿಸ್ತರಣೆ ಮಾಡಲಾಗಿದೆ. ಇದು ರಾಜ್ಯದಲ್ಲಿಯೇ ಪ್ರಥಮ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಕೆನ್ನಾಳು ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಮನ್‌ಮುಲ್ ವತಿಯಿಂದ ಮಂಗಳವಾರ ಆಯೋಜಿಸಿದ್ದ 2024-25ನೇ ಸಾಲಿನ ರಾಸುಗಳಿಗೆ ವಿಮೆ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ 1967ರಲ್ಲಿ ಗ್ರಾಮಠಾಣಾ ವ್ಯಾಪ್ತಿಯನ್ನು ಸರ್ವೇ ಮಾಡಿ ಗುರುತಿಸಲಾಗಿತ್ತು. ನಂತರದಲ್ಲಿ ಈವರೆಗೂ ಇಂತಹ ಯಾವುದೇ ಯೋಜನೆಗಳು ಆಗಿರಲಿಲ್ಲ. ಪ್ರಥಮವಾಗಿ ಕೆನ್ನಾಳು ಗ್ರಾಮ ಪಂಚಾಯಿತಿಯಲ್ಲಿ ಸರ್ವೇ ಕಾರ್ಯ ನಡೆಸಿ ಗ್ರಾಮಠಾಣಾ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಇದರಿಂದ ಗ್ರಾಮದ ಜನರಿಗೆ ಅನೇಕ ಸರ್ಕಾರಿ ಸವಲತ್ತುಗಳು ಸಿಗಲಿದೆ. ಇಂತಹ ಕೆಲಸಕ್ಕೆ ಸಹಕಾರ ನೀಡಿದ ಜಿಲ್ಲಾಡಳಿತ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಕಾರ್ಯಕ್ರಮ ಯಶಸ್ಸು ಕಂಡಿದೆ. ಕಾರ್ಯಕ್ರಮಕ್ಕೂ ಮೊದಲು ನಾನು ಸೇರಿದಂತೆ ಅಧಿಕಾರಿಗಳಲ್ಲೂ ಸಾಕಷ್ಟು ಗೊಂದಲ ಇತ್ತು. ಎಲ್ಲವನ್ನೂ ನಿಭಾಯಿಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಸಾಕಾರಗೊಳಿಸಿದ್ದೇವೆ ಎಂಬ ಸಮಾಧಾನವಿದೆ. ಕೆನ್ನಾಳು ಗ್ರಾಪಂನಲ್ಲಿ ಹದಿನೈದು ದಿನಗಳ ಕಾಲ ಕಾರ್ಯಕ್ರಮ ನಡೆದಿದೆ. ಮುಂದಿನ ಗ್ರಾಪಂಗಳಲ್ಲಿ ಇದೇ ಕಾರ್ಯಕ್ರಮವನ್ನು ಕೇವಲ 5 ದಿನಗಳಲ್ಲಿ ಮುಗಿಸಲಾಗುವುದು. ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದ ಯಶಸ್ಸಿಗಾಗಿ ಪ್ರತಿ ಮನೆ ಮನೆಗೂ ತೆರಳಿ ಜನರಿಗೆ ಅಗತ್ಯವಿದ್ದ ಸರ್ಕಾರಿ ಸೇವೆಗಳನ್ನು ಗುರುತಿಸಿ ಪಟ್ಟಿ ಮಾಡಿದರು. ಹೀಗಾಗಿ ಕಾರ್ಯಕ್ರಮ ನಿರೀಕ್ಷೆಯಂತೆ ನಡೆಯಿತು ಎಂದರು.
ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಾಗಗಳನ್ನು ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರಿ ಜಮೀನಿನ ಸುತ್ತ ಕಂದಕ ನಿರ್ಮಿಸಿ ಸಸಿಗಳನ್ನು ನೆಡುತ್ತಿದ್ದಾರೆ. ಸೆಸ್ಕ್ ಇಲಾಖೆ ಅಗತ್ಯವಿರುವ ಕಡೆ ವಿದ್ಯುತ್ ಪರಿವರ್ತಕ ಅಳವಡಿಕೆ, ಕಂಬ ಬದಲಾವಣೆ ಹಾಗೂ ಜೋತು ಬಿದ್ದಿದ್ದ ವಿದ್ಯುತ್ ತಂತಿಗಳನ್ನು ಬದಲಾಯಿಸಿದ್ದಾರೆ. ಕಂದಾಯ ಇಲಾಖೆಯಿಂದ ಪಹಣಿ ತಿದ್ದುಪಡಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪೋಡಿ, ಹದ್ದುಬಸ್ತು ಮುಂತಾದ ಕೆಲಸಗಳು ನಡೆದಿದೆ ಎಂದು ವಿವರಿಸಿದರು.
ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಇಡೀ ತಾಲೂಕು ಆಡಳಿತವನ್ನು ಕೆನ್ನಾಳು ಗ್ರಾಪಂಗೆ ವರ್ಗಾಯಿಸಿ ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಯಶಸ್ವಿಯಾಗಿದ್ದಾರೆ. ಈ ಕಾರ್ಯಕ್ರಮದ ಅಂಗವಾಗಿಯೇ ರಾಸುಗಳ ವಿಮೆ ಕಾರ್ಯಕ್ರಮ ನಡೆಯುತ್ತಿದ್ದು, ರಾಸುಗಳ ಮಾಲೀಕರು ತಪ್ಪದೆ ತಮ್ಮ ರಾಸುಗಳನ್ನು ವಿಮೆ ವ್ಯಾಪ್ತಿಗೆ ತರಬೇಕು. ರೈತರು ಶೇ.50 ವಿಮೆ ಹಣ ಪಾವತಿಸಿದರೆ ಉಳಿದ ಹಣವನ್ನು ಒಕ್ಕೂಟ ಪಾವತಿಸುತ್ತದೆ. ರಾಸುಗಳಿಗೆ ಚರ್ಮ ಗಂಟು, ಹುಣ್ಣು ಇತ್ಯಾದಿ ವೈರಸ್ ರೋಗಗಳಿಂದ ಆಕಸ್ಮಿಕವಾಗಿ ಮೃತಪಟ್ಟರೆ 40 ರಿಂದ 60 ಸಾವಿರ ರೂ.ವಿಮೆ ಹಣ ಪಾವತಿಯಾಗುತ್ತದೆ. ವಿಮೆ ಮಾಡಿಸದಿದ್ದರೆ ಬಿಡಿಗಾಸು ಸಿಗುವುದಿಲ್ಲ. ಹೀಗಾಗಿ ಗ್ರಾಮದಲ್ಲಿರುವ 600 ರಾಸುಗಳ ಮಾಲೀಕರು ತಪ್ಪದೆ ವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದರು.
ಮನ್‌ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗವಿಸ್ತರಣಾಧಿಕಾರಿ ಜಗದೀಶ್, ಪಶು ಇಲಾಖೆ ಮುಖ್ಯವೈದ್ಯಾಧಿಕಾರಿ ಹಿಮಾಚಲ್, ಡಾ.ಸಂತೋಷ್, ಡೇರಿ ಅಧ್ಯಕ್ಷ ಚೇತನ್‌ಕುಮಾರ್, ಉಪಾಧ್ಯಕ್ಷೆ ಭಾಗ್ಯಮ್ಮ, ರೈತಸಂಘ ಮುಖಂಡರಾದ ನಾಗರಾಜು, ವಿಜಯಕುಮಾರ್ ಇತರರು ಇದ್ದರು.