

* ಗ್ರಾಮಕ್ಕಿದೆ ಮುಡುಕುತೊರೆ ನಂಟು
ಚೇತನ್ ಚಕ್ಕೆರೆ ಬಿಡದಿ
ಬಿಡದಿ ಪುರಸಭೆ ವ್ಯಾಪ್ತಿಯ ಕೆಂಚನಕುಪ್ಪೆ ಗ್ರಾಮ ವಿಶಿಷ್ಟ ಇತಿಹಾಸದ ಹೆಗ್ಗುರುತಿಗೆ ಸಾಕ್ಷಿಯಾಗಿದೆ. ಪುರಸಭೆ ವ್ಯಾಪ್ತಿಯಲ್ಲಿನ 4ನೇ ವಾರ್ಡ್ ಕೆಂಚನಕುಪ್ಪೆಯಲ್ಲಿ ಹಲವು ದೇವಾಲಯಗಳಿದ್ದು, ವಿಶಿಷ್ಟವಾದ ಧಾರ್ಮಿಕತೆಗೆ ಹೆಸರುವಾಸಿಯಾಗಿದೆ.
ಕೆಂಚನಕುಪ್ಪೆ ಉದಯದ ಹಿಂದೆ ವ್ಯಕ್ತಿಯ ಹೆಸರು ಕೇಳಿ ಬರುತ್ತದೆ. ನೂರಾರು ವರ್ಷಗಳ ಹಿಂದೆ ಈ ಗ್ರಾಮದ ಜಾಗದಲ್ಲಿ ಪೊದೆಗಳಿದ್ದವು. ಇಂತಹ ಜಾಗದಲ್ಲಿ ವ್ಯಕ್ತಿಯೊಬ್ಬರು ಹುಲ್ಲಿನ ಮನೆ ನಿರ್ಮಿಸಿ ವಾಸ ಮಾಡುತ್ತಿದ್ದರು. ಆತನ ಹೆಸರು ಕೆಂಚಣ್ಣ. ಆತ ನೋಡಲು ಇಂಗ್ಲಿಷರಂತೆ ಕೆಂಚ್ಚನಂತೆ ಕಾಣುತ್ತಿದ್ದ. ಕಾಲ ನಂತರ ಕೆಲವು ಮಂದಿ ಬೇರೆಡೆಗಳಿಂದ ಬಂದು ಇಲ್ಲಿ ನೆಲೆ ಕಂಡು ಕೊಂಡಿದ್ದರು. ವರ್ಷಗಳು ಕಳೆದಂತೆ ಆ ಕೆಂಚಣ್ಣನ ತಲೆಯಲ್ಲಿ ಕುಪ್ಪೆ ಬಂದಿತ್ತು. ಇದನ್ನು ಗಮನಿಸಿದ ಕೆಲವರು ಗ್ರಾಮಕ್ಕೆ ಈ ಕೆಂಚಣ್ಣನೆ ಮೊದಲು ಬಂದಿದ್ದ ಎನ್ನುವ ಕಾರಣಕ್ಕೆ ಕೆಂಚ ಹಾಗೂ ಆತನ ತಲೆಯಲ್ಲಿ ಮೂಡಿಬಂದಿದ್ದ ಕುಪ್ಪೆಯನ್ನು ಸೇರಿಸಿ ಕೆಂಚನಕುಪ್ಪೆ ಎಂದು ಗ್ರಾಮಕ್ಕೆ ನಾಮಕರಣ ಮಾಡಿದರೆಂದು ಹೇಳುತ್ತಾರೆ.
ಇತಿಹಾಸ ಪ್ರಸಿದ್ಧ ಮುಡುಕುತೊರೆ ಗ್ರಾಮಕ್ಕೂ ಕೆಂಚನಕುಪ್ಪೆಗೂ ನಂಟಿದೆ. ಈ ಗ್ರಾಮಕ್ಕೆ ವೀರಮಾಸ್ತಮ್ಮ ಹಾಗೂ ಪಾರ್ವತಿ ಎಂಬ ದೇವರು ಮುಡುಕುತೊರೆಯಿಂದ ವಲಸೆ ಬರುತ್ತಿದ್ದರಂತೆ. ಹೀಗೆ ಒಂದಿಷ್ಟು ದಿನ ಅಲ್ಲಿಂದ ವಲಸೆ ಬಂದು ಇಲ್ಲಿ ಒಂದಿಷ್ಟು ದಿನ ಇದ್ದು, ತರುವಾಯ ಮುಡುಕುತೊರೆಗೆ ಹೋಗುತ್ತಿದ್ದರಂತೆ. ಹಾಗಾಗಿ ಕೆಂಚನಕುಪ್ಪೆ ಈ ಎರಡು ದೇವರಿಗೆ ತಾಯಿ ಮನೆಯಾಗಿ ಮಾರ್ಪಟ್ಟಿತು. ವೀರಮಾಸ್ತಮ್ಮ ಈ ಗ್ರಾಮದನೆಲೆ ಕಂಡರೆ, ಪಾರ್ವತಿ ದೇವಿ ಮುಡುಕುತೊರೆಯಲ್ಲಿ ನೆಲೆಕಂಡಿದ್ದಳಂತೆ. ಹಾಗಾಗಿ ವರ್ಷಕ್ಕೊಮ್ಮೆ ನಡೆಯುವ ವೀರಮಾಸ್ತಮ್ಮ ದೇವಿಯ ಉತ್ಸವದ ದಿನ ಮುಡುಕುತೊರೆಗೆ ಹೋಗಿ ಪಾರ್ವತಿ ದೇವಿಗೆ ಬಾಗಿನ ಕೊಟ್ಟು ಬರುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಕೆಂಚನಕುಪ್ಪೆ ಗ್ರಾಮದಲ್ಲಿ ಭಕ್ತಿಗೇನು ಕಡಿಮೆ ಇಲ್ಲ. ಹತ್ತಾರು ದೇವಾಲಯಗಳು ನೆಲೆ ಕಂಡಿರುವ ಕಾರಣದಿಂದಾಗಿ ಶಾಂತಿ ಧರ್ಮ ಪಾಲನೆ ನೆಲೆ ಕಟ್ಟಿದೆ. ಗ್ರಾಮದಲ್ಲಿ ಬಸವಣ್ಣ, ವೀರಮಸ್ತಮ್ಮ, ಆಂಜನೇಯ, ಮಾರಮ್ಮ, ವೀರಗಲ್ಲಯ್ಯ, ಮುತ್ತರಾಯ ಸೇರಿ ಹಲವು ದೇವಾಲಯಗಳಿವೆ. ಇಷ್ಟು ದೇವಾಲಯಗಳಲ್ಲಿ ವೀರಮಾಸ್ತಮ್ಮ ದೇವರು ಬಹಳ ವರ್ಷಗಳ ಹಿಂದೆ ನೆಲೆಯಾಗಿರುವ ಹಿನ್ನೆಲೆಯಲ್ಲಿ ಈ ವೀರಮಾಸ್ತಮ್ಮ ದೇವಾಲಯನ್ನು ದೊಡ್ಡದಾಗಿ ನಿರ್ಮಾಣ ಮಾಡಲಾಗಿದೆ. ಪ್ರತಿ ವರ್ಷ ಈ ದೇವರ ಕೊಂಡ ಹಾಗೂ ಉತ್ಸವಗಳು ವಿಜೃಂಭಣೆಯಿಂದ ನಡೆಯುತ್ತವೆ.