

ಕೆ.ಆರ್.ನಗರ:ಜಗತ್ತಿನಲ್ಲಿಯೇ ಪ್ರಖ್ಯಾತ ನಗರವಾಗಿರುವ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ದೂರದೃಷ್ಟಿ ಸರ್ವರಿಗೂ ಮಾದರಿ ಎಂದು ಶಾಸಕ ಡಿ.ರವಿಶಂಕರ್ ಬಣ್ಣಿಸಿದರು.
ಪಟ್ಟಣದ ಆಡಳಿತಸೌಧದ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಪುರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಕೆಂಪೇಗೌಡರ 516ನೇ ಜಯಂತ್ಯುತ್ಸವ ಕಾರ್ಯದಲ್ಲಿ ಮಾತನಾಡಿ, 450 ವರ್ಷಗಳ ಹಿಂದೆಯೇ ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಲು ಬುನಾದಿ ಹಾಕಿದ ಅವರ ಯೋಚನೆ ಪ್ರಶಂಸನೀಯ ಎಂದರು.
ಸಮಾಜದ ಎಲ್ಲ ವರ್ಗದ ಜನರು ಸ್ವಯಂ ಉದ್ಯೋಗ ಮಾಡಿಕೊಂಡು ಸ್ವಾಬಲಂಬಿ ಜೀವನ ಸಾಗಿಸಬೇಕು ಎಂಬ ಸದುದ್ದೇಶದಿಂದ ಅಂದೇ ವಿವಿಧ ಪೇಟೆಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಅಂತಹ ಮಹಾನ್ ಸಾಧಕನನ್ನು ಒಂದೇ ಜಾತಿಗೆ ಸೀಮಿತ ಮಾಡದೆ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸುವ ಮೂಲಕ ಗೌರವಿಸಬೇಕು ಎಂದರು.
ತಾಲೂಕು ಆಡಳಿತದ ವತಿಯಿಂದ ಸರಳವಾಗಿ ನಾಡಪ್ರಭುಗಳ ಜಯಂತಿ ಆಚರಣೆ ಮಾಡಲಾಗಿದ್ದು ಜುಲೈ 11ರಂದು ತಾಲೂಕು ಒಕ್ಕಲಿಗರ ಸಂಘ ಮತ್ತು ಇತರ ಸಮುದಾಯದ ಸಹಕಾರದೊಂದಿಗೆ ನಡೆಯುವ ಜಯಂತಿ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಘೋಷಣೆ ಮಾಡಿದರು.
ಸಾಲಿಗ್ರಾಮದ ತಾಲೂಕು ಕಚೇರಿ ಆವರಣದಲ್ಲಿ ಕೆಂಪೇಗೌಡರ ಪುತ್ಥಳಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲು ಭರವಸೆ ನೀಡಿದ ಡಿ.ರವಿಶಂಕರ್ ಜುಲೈ 11ರಂದು ಅದ್ದೂರಿ ಜಯಂತಿ ಕಾರ್ಯಕ್ರಮ ಆಚರಿಸುವುದಕ್ಕಿಂತ ಮುಂಚೆ ಪೂರ್ವಭಾವಿ ಸಭೆ ಕರೆದು ಉತ್ತಮ ಕಾರ್ಯಕ್ರಮ ಮಾಡುವಂತೆ ಒಕ್ಕಲಿಗ ಸಂಘದವರಿಗೆ ಕಿವಿಮಾತು ಹೇಳಿದರು.
ಕೆರಳಿದ ಶಾಸಕ: ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕೆರಳಿಕೆಂಡವಾದ ಶಾಸಕರು ತಾಲೂಕು ಮಟ್ಟದ ಅಧಿಕಾರಿಗಳ ಹಾಜರಾತಿ ಪಡೆದು ಬಾರದವರ ಪಟ್ಟಿಯನ್ನು ನೀಡಬೇಕೆಂದು ತಹಸೀಲ್ದಾರರಿಗೆ ತಿಳಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಸೂಚಿಸಿದರು.
ಕಾರ್ಯಕ್ರಮವನ್ನು ಕುರಿತು ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮು, ನಿವೃತ್ತ ಉಪನ್ಯಾಸಕ ಡಾ.ಕೃಷ್ಣ, ಒಕ್ಕಲಿಗ ಸಮಾಜದ ಮುಖಂಡ ಎಸ್.ಪಿ.ತಮ್ಮಯ್ಯ, ಎಂ.ಜೆ.ಕುಮಾರ್, ಎಚ್.ಎಚ್.ನಾಗೇಂದ್ರ, ಉದಯಶಂಕರ್ ಇತರರು ಇದ್ದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ನಿರ್ದೇಶಕ ಸೈಯದ್ ಜಾಬೀರ್, ಪುರಸಭಾ ಸದಸ್ಯ ಕೋಳಿಪ್ರಕಾಶ್, ಶಂಕರ್‌ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಡಿ.ಸಿ.ರವಿ, ಎಪಿಎಂಸಿ ಮಾಜಿ ನಿರ್ದೇಶಕ ಹೆಚ್.ಪಿ.ಪ್ರಶಾಂತ್, ತಾಪಂ ಇಒ ವಿ.ಪಿ.ಕುಲದೀಪ್, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಬಿಇಒ ಆರ್.ಕೃಷ್ಣಪ್ಪ, ಒಕ್ಕಲಿಗ ಸಮಾಜದ ಮುಖಂಡರಾದ ಹೆಚ್.ಕೆ.ಹರೀಶ್, ವೈ.ಎಸ್.ಜಯಂತ್, ಹೆಚ್.ಪಿ.ಪರಶುರಾಮ್, ಸಂಪತ್, ಎಂ.ಜೆ.ರಮೇಶ್, ಎ.ಟಿ.ಗೋಪಾಲ್ ಇತರರು ಇದ್ದರು.