ಶೀಘ್ರದಲ್ಲೇ ಕೆಂಪೇಗೌಡ ಜಯಂತಿ ದಿನಾಂಕ ನಿಗದಿ:ತುಷಾರ್ ಗಿರಿನಾಥ್ ಹೇಳಿಕೆ

tushar girinath
Published on

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಸದ್ಯದಲ್ಲೇ ದಿನಾಂಕ ನಿಗದಿ ಮಾಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಿನಾಂಕ ನಿಗದಿಗೊಳಿಸುವಂತೆ ನಮಗೆ ಸೂಚನೆ ಕೊಟ್ಟಿದ್ದಾರೆ. ಜಯಂತಿ ಆಚರಣೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನೈಜ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಇದು ಮುಗಿದ ಬಳಿಕ ಅಂತಿಮವಾಗಿ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಪ್ರಶಸ್ತಿಗಾಗಿ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಎಷ್ಟು ಜನರಿಗೆ ಪ್ರಶಸ್ತಿ ನೀಡಬೇಕು ಮತ್ತು ಪ್ರಶಸ್ತಿ ಮೊತ್ತ ಸೇರಿ ಇತ್ಯಾದಿ ಬಗ್ಗೆ ಸಮಿತಿ ತೀರ್ಮಾನಿಸಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮುಖ್ಯ ಆಯುಕ್ತರು ಮಾಹಿತಿ ನೀಡಿದರು.

‘ಪಾಲಿಕೆ ಗುಣ ನಿಯಂತ್ರಣ ಪ್ರಯೋಗಾಲಯ’ದಲ್ಲಿ ಸಂಭವಿಸಿದ ಅಗ್ನಿ ದುರುಂತದಲ್ಲಿ ಸುಟ್ಟ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರು ಗುಣಮುಖರಾಗುವ ನಿರೀಕ್ಷೆ ಇದೆ. ಕೆಲವರಿಗೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ದಾಖಲಿಸಲು ನಾವು ಸಿದ್ಧವಾಗಿದ್ದೇವೆ. ಇದರ ಸಂಬಂಧ ಪ್ರತಿ ನಿತ್ಯ ವೈದ್ಯರ ಜತೆ ಸಂಪರ್ಕ ಮಾಡುತ್ತಿದ್ದೇವೆ. ಏನಾದರೂ ಆರೋಗ್ಯದಲ್ಲಿ ಏರುಪೇರು ಆದರೂ ಒಳ್ಳೆಯ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ವ್ಯವಸ್ಥೆ ಇದೆ ಎಂದು ವೈದ್ಯರು ನಮಗೆ ತಿಳಿಸಿದ್ದಾರೆ. ಹೀಗಾಗಿ, ರೋಗಿಗಳು ಹಾಗೂ ಅವರ ಸಂಬಂಧಿಕರು ಆತಂಕಗೊಳ್ಳುವ ಆಗತ್ಯವಿಲ್ಲ ಎಂದು ತುಷಾರ್ ಗಿರಿನಾಥ್ ಹೇಳಿದರು.

ಕುಡಿಯುವ ನೀರು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ 110 ಹಳ್ಳಿಗಳು ಸೇರಿ ಪಾಲಿಕೆ ಎಲ್ಲ ವಲಯಗಳಿಗೆ ಬೋರ್‌ವೆಲ್‌ಗಳನ್ನು ಕೊರೆಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಕೆಲ ವಲಯಗಳಲ್ಲಿ ಜಾಸ್ತಿ ಬೋರ್‌ವೆಲ್ ಕೊರೆಸಬೇಕಿದೆ. ಹೀಗಾಗಿ ಬೋರ್‌ವೆಲ್ ಕೊರೆಸುವ ಪ್ರಕ್ರಿಯೆ ಸದ್ಯದಲ್ಲೇ ಶುರುವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net