ಬೆಂಗಳೂರು ವಿಶ್ವ ಖ್ಯಾತಿ ಪಡೆಯಲು ಕೆಂಪೇಗೌಡರೇ ಕಾರಣ

ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ ಕಾರ್ಯಕ್ರಮ (8)
Published on

ರಾಮನಗರ:  ಬೆಂಗಳೂರು ಪ್ರಪಂಚಾದ್ಯಂತ ವ್ಯಾಪಾರ ವಹಿವಾಟಿನಲ್ಲಿ ಇಂದು ಅಗ್ರಸ್ಥಾನದಲ್ಲಿದೆ. ಇದಕ್ಕೆ ಕೆಂಪೇಗೌಡರು ಹಾಕಿದ  ಅಡಿಪಾಯ ಕಾರಣ ಎಂದು  ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಒಕ್ಕಲಿಗರ ಸಂಘ, ಕೆಂಪೇಗೌಡ ಜಯಂತೋತ್ಸವ ಸಮಿತಿವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಂದು ಕೆಂಪೇಗೌಡರು ಇಡೀ ಬೆಂಗಳೂರಿನ ಸುತ್ತಮುತ್ತಲು ಸಾಮ್ರಾಜ್ಯ ವಿಸ್ತರಣೆ ಮಾಡಿದ್ದರು. ಅದೇ ರೀತಿ ನೀವು ನಿಮ್ಮ ಅವಕಾಶಗಳನ್ನು ಕೇವಲ ಜಿಲ್ಲೆಗೆ ಸೀಮಿತಗೊಳಿಸಿಕೊಳ್ಳಬೇಡಿ. ದೇಶಾದ್ಯಂತ ಉದ್ಯೋಗ ನಿರ್ವಹಿಸುವಂತಹ ಮಾನಸಿಕ ಸ್ಥಿತಿಯನ್ನು  ರೂಡಿ ಮಾಡಿಕೊಳ್ಳಬೇಕು. ಈ ಸಂದೇಶವನ್ನು ಎಲ್ಲಾ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇಲ್ಲಿ ನೆರೆದಿರುವ ಎಲ್ಲಾ ತಂದೆ ತಾಯಂದಿರಿಗೆ ನಾನು ಮನವಿ ಮಾಡುತ್ತಿದ್ದೇನೆ ತಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದ ವಿಷಯಗಳಲ್ಲಿ ಕೇವಲ ಜಿಲ್ಲೆಗೆ ಸೀಮಿತಗೊಳಿಸಬೇಡಿ ದೇಶಾದ್ಯಂತ ಅಪಾರ ಅವಕಾಶಗಳಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಜಾನಪದ ವಿದ್ವಾಂಸರು ಹಾಗೂ ಸಾಹಿತಿಗಳಾದ ಡಾ. ಬೈರೇಗೌಡ ಅವರು ಮಾತನಾಡಿ, ಕೆಂಪೇಗೌಡರು ಎಲ್ಲಾ ಸಮುದಾಯದವರೆಗೆ ಅನುಕೂಲವಾಗುವಂತೆ 16 ಪೇಟೆಗಳನ್ನು ನಿರ್ಮಿಸಿದರು ಇದು ಅವರು ಸಮುದಾಯಗಳ ಅಭಿವೃದ್ಧಿಗೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಾಗಿದ್ದವು ಬೆಂಗಳೂರು ಸುತ್ತಮುತ್ತಲು ಸಾವಿರಾರು ಕೆರೆಗಳನ್ನು ನಿರ್ಮಿಸಿದ್ದರು. ಅವರ ಜನೋಪಕಾರಿ ಕಾರ್ಯಗಳು ಇಂದಿಗೂ ಮಾದರಿಯಾಗಿವೆ ಎಂದು ತಿಳಿಸಿದರು.

ಯುವಕರು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಕೆಂಪೇಗೌಡರು ರೈತಾಪಿ ಜನರಿಗೆ ಕೃಷಿಗೆ ಅನುಕೂಲವಾಗುವಂತೆ ಕೆರೆಗಳನ್ನು ನಿರ್ಮಿಸಿ ಅನುಕೂಲ ಮಾಡಿ ಕೊಟ್ಟಿದ್ದರು ಹಲವಾರು ದೇವಸ್ಥಾನಗಳನ್ನು ನಿರ್ಮಿಸಿ ಹಲವಾರು ವರ್ತಕರಿಗೆ ಆಶ್ರಯವನ್ನು ನೀಡಿದರು ಅಂದಿನ ಕಾಲದಲ್ಲೇ ಬೆಂಗಳೂರನ್ನು ಮಾದರಿ ಬೆಂಗಳೂರನ್ನಾಗಿ ನಿರ್ಮಿಸಿದ್ದರು ಇದಕ್ಕೆ ಅವರು ಬೆಂಗಳೂರಿನ ನಾಲ್ಕು ಮೂಲೆಯಲ್ಲಿ ನಿರ್ಮಿಸಿದ್ದ ಕೋಟೆಗಳೆ ಸಾಕ್ಷಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಅಭ್ಯಾಸ ಮಾಡಿ ಅತಿಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಕಲೆ, ಸಾಹಿತ್ಯ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ನಾಡಪ್ರಭು ಶ್ರೀ ಕೆಂಪೇಗೌಡರ ಪ್ರತಿಮೆಗೆ ಶ್ರೀ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಮಠಾಧಿಕಾರಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಅವರು ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್. ಎಚ್ ರಾಮಚಂದ್ರ, ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚೇತನ್, ನಾಡಪ್ರಭು ಕೆಂಪೇಗೌಡ ಸಮಿತಿಯ ಅಧ್ಯಕ್ಷರಾದ ಚಂದ್ರಣ್ಣ, ಕಾರ್ಯದರ್ಶಿಗಳಾದ ರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು ಟಿ.ಜಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net