ಜಯದೇವ ಹೃದ್ರೋಗ ಆಸ್ಪತ್ರೆ, ನಿತಿನ್ ಕಾಮತ್, ಅದಿತಿ ಅಶೋಕ್​ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ​

Kempegowda Awardees
Published on

ಬೆಂಗಳೂರು: ಕೆಂಪೇಗೌಡ ಜಯಂತಿ ಅಂಗವಾಗಿ ಪ್ರತಿ ವರ್ಷ ನೀಡುವ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಗೆ ಜಯದೇವ ಹೃದ್ರೋಗ ಆಸ್ಪತ್ರೆ, ಯುವ ಉದ್ಯಮಿ ನಿತಿನ್ ಕಾಮತ್ ಹಾಗೂ ಯುವ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ಧಾರೆ.

ಮಂಗಳವಾರ (ಜೂ 27) ಮಧ್ಯಾಹ್ನ 12ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಈ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಬಿ.ಎಲ್ ಶಂಕರ್ ಅವರ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಚರ್ಚೆ ಮಾಡಿ ಮೂವರು ಸಾಧಕರ ಆಯ್ಕೆ ಮಾಡಿದೆ. ಈ ಪ್ರಶಸ್ತಿ ಜೊತೆಗೆ 5 ಲಕ್ಷ ನೀಡುವ ಪದ್ಧತಿ ನಡೆದುಕೊಂಡು ಬಂದಿದೆ ಎಂದು ಮಾಹಿತಿ ನೀಡಿದ್ಧಾರೆ.

ಮೂವರು ಸಾಧಕರಿಗೆ ಸನ್ಮಾನ

ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಡಾ. ಮಂಜುನಾಥ್ ಅವರಿಂದ ಕಸಗುಡಿಸುವ ಕೆಲಸಗಾರರವರೆಗೂ ಎಲ್ಲರೂ ಸೇವೆ ಸಲ್ಲಿಸಿದ್ದು, ಹೀಗಾಗಿ ಈ ಸಂಸ್ಥೆಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. 1600 ಬೆಡ್ ಸೌಲಭ್ಯ ಹೊಂದಿರುವ ಆಸ್ಪತ್ರೆಯು ಬಹಳ ಕಡಿಮೆ ದರದಲ್ಲಿ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಸೇವೆ ನೀಡುತ್ತಾ ಬಂದಿದೆ.

Kempegowda Awardees

ಇನ್ನು ಕಿರಿಯ ವಯಸ್ಸಿನಲ್ಲೇ ಜೇರೋಧ ಎಂಬ ನವೋದ್ಯಮ ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಬೆಳೆದಿರುವ ನಿತಿನ್ ಕಾಮತ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ನವೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಈ ಸಂಸ್ಥೆಯಿಂದ ಬರುವ 25% ರಷ್ಟು ದುಡಿಮೆ ಹಣವನ್ನು ಸಾಮಾಜಿಕ ಸೇವೆಗೆ ಮುಡಿಪಿಟ್ಟಿದ್ದಾರೆ.

ಬೆಂಗಳೂರಿನ ಯುವ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರನ್ನು ಕೂಡ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅದಿತಿ ಅಶೋಕ್ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದರು. ವಿಶ್ವ ಗಾಲ್ಫ್ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಿರುವ ಆಟಗಾರ್ತಿ ಅದಿತಿ ಅಶೋಕ್ ಆಗಿದ್ದಾರೆ.

ಅಡ್ಡಿಪಡಿಸುವುದಿಲ್ಲ

ಈ ಬಾರಿ ಆರೋಗ್ಯ, ಉದ್ದಿಮೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಈ ಮೂವರು ವ್ಯಕ್ತಿಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಸಾಧಕರಿಗೆ ನಾಳೆ ವಿಧಾನಸೌಧದಲ್ಲಿ ನಡೆಯಲಿರುವ 514ನೇ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕಳೆದ ಸರ್ಕಾರ ಹಾಸನದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿತ್ತು ಅದನ್ನು ಅಡ್ಡಿಪಡಿಸಲು ನಾವು ಇಚ್ಛಿಸುವುದಿಲ್ಲ. ಬೆಂಗಳೂರಿನ ಕಾರ್ಯಕ್ರಮ ಮುಗಿಸಿ ನಂತರ ಹಾಸನ ಕಾರ್ಯಕ್ರಮಕ್ಕೆ ತೆರಳುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net