ಕೆಂಪೇಗೌಡರು 500 ವರ್ಷಗಳ ಹಿಂದೆಯೇ ಸ್ಮಾರ್ಟ್‌ಸಿಟಿ ಯೋಜನೆ ಹೊಂದಿದ್ದರು: ಡಾ. ನಂಜಾವಧೂತ ಸ್ವಾಮೀಜಿ

Sri
Published on

ಬೆಂಗಳೂರು: ಸುಮಾರು 500 ವರ್ಷಗಳ ಹಿಂದೆಯೇ ಕೆಂಪೇಗೌಡರು ಸ್ಮಾರ್ಟ್ ಸಿಟಿ ಯೋಜನೆಯ ಕುರಿತು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅಂತಹ ದೂರದೃಷ್ಟಿತ್ವ ಹೊಂದಿದ ಮಹಾನ್ ವ್ಯಕ್ತಿಯ ಕುರಿತು ಇಂದಿನ ಯುವ ಸಮೂಹ ಅಧ್ಯಯನ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ನಂಜಾವಧೂತ ಸ್ವಾಮೀಜಿ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ನಾಡಪ್ರಭು ಕೆಂಪೇಗೌಡ ಮಾನವಿಕ ಮತ್ತು ಸಮಾಜ ವಿಜ್ಞಾನಗಳ ಅಧ್ಯಯನ ಕೇಂದ್ರದಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸರಕಾರವು ಕೆಂಪೇಗೌಡರ ಕುರಿತು ಪಠ್ಯ ಅಳವಡಿಸಬೇಕು. ನಮ್ಮ ಮೆಟ್ರೋಗೆ ಕೆಂಪೇಗೌಡ ಮೆಟ್ರೋ ಎಂಬುದಾಗಿ ನಾಮಕರಣ ಮಾಡಬೇಕು. ಕರ್ನಾಟಕದ ಯಾವುದಾದರೊಂದು ವಿಶ್ವವಿದ್ಯಾಲಯಕ್ಕೆ ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಬೇಕು. ವಿವಿಗಳಲ್ಲಿ ಕೆಂಪೇಗೌಡ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ, ಅವುಗಳಿಗೆ ಸೂಕ್ತ ಅನುದಾನ ನೀಡಿ, ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವಂತೆ ಪ್ರೇರೇಪಿಸಬೇಕು. ಆ ಮೂಲಕ ಕೆಂಪೇಗೌಡರ ಕುರಿತು ಮುಂದಿನ ಪೀಳಿಗೆಗೆ ತಿಳಿಸುವಂತ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಕುಲಸಚಿವ ಷೇಕ್ ಲತೀಪ್ ಮಾತನಾಡಿ, ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡುವ ಸಂದರ್ಭದಲ್ಲಿ ಎಲ್ಲ ವೃತ್ತಿಯ ಜನರೂ ಇಲ್ಲಿ ಬದುಕಬೇಕು ಎಂಬ ಉದ್ದೇಶ ಹೊಂದಿದ್ದರು. ಅದಕ್ಕಾಗಿಯೇ ವೃತ್ತಿ ಆಧಾರಿತವಾಗಿ ಸುಮಾರು 64 ಪೇಟೆಗಳನ್ನು ನಿರ್ಮಾಣ ಮಾಡಿ ಉತ್ತಮ ಅರ್ಥಶಾಸ್ತ್ರ ಎನಿಸಿಕೊಂಡಿದ್ದರು. ಬೆಂಗಳೂರಿಗೆ ನಾಲ್ಕು ದಿಕ್ಕುಗಳಲ್ಲಿ ಕೋಟೆ ನಿರ್ಮಾಣ ಮಾಡಿ ಉತ್ತಮ ರಕ್ಷಣಾ ತಜ್ಞರಾಗಿದ್ದರು ಎಂದು ಹೇಳಿದರು.

ವಿವಿ ವಿತ್ತಾಧಿಕಾರಿ ಅಜಿತ್‌ಕುಮಾರ್ ಹೆಗ್ಡೆ, ನಿವೃತ್ತ ಪ್ರಾಧ್ಯಾಪಕ ಷೇಕ್ ಮಸ್ತಾನ್, ಪ್ರಾಧ್ಯಾಪಕ ಎಸ್.ಪುಟ್ಟಸ್ವಾಮಯ್ಯ, ಡಾ.ಅಪ್ಪಾಜಿ, ಡಾ.ಶಶಿಧರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net