ದಾಖಲೆಗಳಲ್ಲಿ ಕೆಂಪೇಗೌಡರ ಕೋಟೆ ಹೆಸರೇ ಮಾಯ ! : ಕಂದಕ ಉಳಿವಿಗೆ ಸಹಕರಿಸಿ ; ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಮನವಿ

6
Published on

ಮಾಗಡಿ : ದಾಖಲೆಗಳಲ್ಲಿ ಕೆಂಪೇಗೌಡರ ಕೋಟೆಯ ಹೆಸರೇ ಮಾಯವಾಗಿದೆ. ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಹಾಗೂ ಪುರಸಭೆಯ ದಾಖಲೆಗಳಲ್ಲಿಯೂ ವ್ಯತ್ಯಾಸವಿದೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ದೂರಿದರು.

ಪಟ್ಟಣದ ನಾಡಪ್ರಭು ಕೆಂಪೇಗೌಡ ಕೋಟೆಯ ದಕ್ಷಿಣ ಕಂದಕದ ಬಳಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1808ರಲ್ಲಿ ಪಾರಂಪರಿಕ ಇಲಾಖೆಯ ದಾಖಲೆಗಳಲ್ಲಿ ನಾಡಪ್ರಭು ಕೆಂಪೇಗೌಡ ಕೋಟೆಯ ಸ್ವಾಧೀನ ಸ್ವತ್ತು 13 ಎಕರೆ 34 ಗುಂಟೆ ಇದೆ ಎಂದಿದ್ದರೆ, ಈಗ ದಾಖಲೆಯಲ್ಲಿ ಕೋಟೆಯ ಹೆಸರಿಲ್ಲ. ಇದನ್ನು ನೋಡಿದರೆ ಕೋಟೆಯನ್ನು ನಾಶಮಾಡಲು ಮುಂದಾಗಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಈ ಬಗ್ಗೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೆಂಪೇಗೌಡರ ಕೋಟೆ ಜಾಗದ ಬಗ್ಗೆ ಪುರಸಭೆಯಲ್ಲಿ ಮಾಹಿತಿ ಪಡೆದ ವೇಳೆ 11 ಎಕರೆ 9 ಗುಂಟೆಯಿದೆ ಎಂದು ಮಾಹಿತಿ ನೀಡಿದ್ದಾರೆ. ಇದು ಅಸಂಬದ್ಧವಾಗಿದ್ದು ಕೋಟೆಯ ಸಮರ್ಪಕ ವಿಸ್ತೀರ್ಣವನ್ನು ಗುರುತಿಸಿ ನಿಗದಿಪಡಿಸಬೇಕು ಎಂದರು.

ಕೆಂಪೇಗೌಡರ ಕೋಟೆ ಕಂದಕ ಉಳಿವಿಗೆ ಸಹಕಾರ ನೀಡಬೇಕೆಂದು ಎಚ್.ಎಂ.ಕೃಷ್ಣಮೂರ್ತಿ ಮನವಿ ಮಾಡಿದರು. ಕೋಟೆಯ ದಕ್ಷಿಣ ಕಂದಕಕ್ಕೆ ನಿತ್ಯ ಪಟ್ಟಣದ ಹಳೆಯ ಕಟ್ಟಡಗಳ ನೂರಾರು ಟ್ರಾಕ್ಟರ್ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಕೋಟೆ ಮತ್ತು ಕಂದಕದ ಜಾಗದಲ್ಲಿ ಸಾರ್ವಜನಿಕರು ಕಟ್ಟಡಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕೋಟೆ, ಕಂದಕ ಉಳಿಸುವ ಜವಾಬ್ದಾರಿ, ಕಾಳಜಿ ಅಧಿಕಾರಿಗಳಿಗೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ನಾಡಪ್ರಭು ಕೆಂಪೇಗೌಡ ಕೋಟೆಯ ಜಾಗದ ಅಳತೆ ಮಾಡಿ ಜಾಗವನ್ನು ಸಂರಕ್ಷಿಸಿ ಬೇಲಿ, ತಡೆಗೋಡೆ ನಿರ್ಮಿಸುವಂತೆ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಗೆ ಮನವಿ ಮಾಡಿದ ನಂತರ ಈ ಜಾಗವನ್ನು ಅಳತೆ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದರು. ಆದರೆ ಸಮರ್ಪಕವಾಗಿ ಅಳತೆ ಕಾರ್ಯ ಮಾಡಿಲ್ಲ. ಇಲಾಖೆಗಳ ಅಧಿಕಾರಿಗಳು ಕೆಂಪೇಗೌಡರ ಜಾಗವನ್ನು ಸಂರಕ್ಷಿಸುವ ಗೋಜಿಗೆ ಮುಂದಾಗಿಲ್ಲ. ಇದು ನಾಡಿಗೆ ಮಾಡುತ್ತಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಚೀನ ಮತ್ತು ಇತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು, ಅವಶೇಷಗಳು ಹಾಗೂ ಸ್ಮಾರಕಗಳಿಗೆ ಧಕ್ಕೆ, ವಿರೂಪ ಹಾಗೂ ಒತ್ತುವರಿ ಮಾಡಿಕೊಂಡರೆ 2 ವರ್ಷ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲು ಆದೇಶವಿದ್ದರೂ ಒತ್ತುವರಿ ಮಾಡಿಕೊಂಡಿರುವವರಿಗೆ ಯಾವ ಶಿಕ್ಷೆಯನ್ನೂ ನೀಡಿಲ್ಲ ಎಂದು ದೂರಿದರು.

ಮುಖಂಡರಾದ ಪುಟ್ಟಸ್ವಾಮಿ, ಆನಂದ್, ಗೋಪಿ, ಸಯ್ಯದ್, ರಾಮಣ್ಣ, ಕೀರ್ತಿ, ರಮೇಶ್, ಪಣಕನಕಲ್ಲು ಕುಮಾರ್ ಇತರರು ಇದ್ದರು.

ಕೆಂಪೇಗೌಡ ಕೋಟೆ ನಾಶಮಾಡಲು ಪ್ರಯತ್ನಿಸಿರುವ ಮನೆತನಗಳು ಸರ್ವನಾಶವಾಗಲಿದೆ. ಕೋಟೆ ಉಳಿವಿಗೆ ಶಾಸಕರು, ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತದ ಜವಾಬ್ದಾರಿ ಇದೆ. ಇದನ್ನು ಉಳಿಸದಿದ್ದರೆ ನೀವುಗಳೇ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಸಿದರು. ಕೋಟೆ ಅಭಿವೃದ್ಧಿಗೆ 15 ವರ್ಷದಿಂದ ನೂರಾರು ಕೋಟಿ ರೂ. ಅನುದಾನ ಬರುತ್ತಲೇ ಇದೆ. ದಾಖಲೆ ಎಲ್ಲಿದೆ, ಯಾವ ಇಲಾಖೆಯಿಂದ ಬಂದಿದೆ ಎಂದು ತಿಳಿಯಬೇಕಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net