

ಮಾಗಡಿ : ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಕೆಂಪಸಾಗರ ಕೆರೆಯ ಏರಿಯ ತೂಬು ಬಿರುಕು ಬಿದ್ದಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಕಳೆದ 2 ವರ್ಷದ ಹಿಂದೆ ಕೆಂಪಸಾಗರ ಕೆರೆಯ ಏರಿ ಬಿರುಕು ಬಿಟ್ಟು ನೀರು ಪೊಲಾಗುತ್ತಿದ್ದ ವೇಳೆ ಕೆಂಪಸಾಗರ ಗ್ರಾಮಸ್ಥರು ಮುನ್ನೆಚ್ಚರಿಕೆಯಿಂದ ಮರಳಿನ ಮೂಟೆಗಳನ್ನು ಇಟ್ಟು ಏರಿ ಬಿರುಕು ಮುಚ್ಚಿದರು. ಆದರೆ, ಮತ್ತೆ ತೂಬು ಬಿರುಕು ಬಿದ್ದು, ಸಾಕಷ್ಟು ನೀರು ಪೊಲಾಗುತ್ತಿದೆ. ಕೆರೆಗೆ ಒಳ ಹರಿವು ಹೆಚ್ಚಾದಂತೆ ಏರಿ ಹೆಚ್ಚು ಬಿರುಕು ಬೀಳುವ ಸಂಭವ ಇರುವುದರಿಂದ ಏರಿ ಸರಿಪಡಿಸುವಂತೆ ವಾರದಿಂದ ಗ್ರಾಮಸ್ಥರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ತೂಬು ಬಿರುಕಿನಿಂದಾಗಿ ಅಕ್ಕಪಕ್ಕದ ಅಡಕೆ, ತೆಂಗು, ಬಾಳೆ, ರಾಗಿ, ಭತ್ತ, ಗೆಣಸಿನ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ.
ತಾಲೂಕಿನ ಕೆಂಪಸಾಗರ ಕೆರೆ 20 ವರ್ಷದಿಂದ ತುಂಬಿರಲಿಲ್ಲ. ಕಳೆದ ಒಂದುವಾರದಿಂದ ಸುರಿದ ಭಾರಿ ಮಳೆಯಿಂದ ಗುರುವಾರ ಮಧ್ಯಾಹ್ನ ಕೆರೆತುಂಬಿ ಕೋಡಿಬಿದ್ದಿದೆ. ಇದರಿಂದ ಕೆಂಪಸಾಗರ, ಹಾಲಶೆಟ್ಟಹಳ್ಳಿ, ಸಾತನೂರು, ಬೈರನಹಳ್ಳಿ, ಕೊಂಡಹಳ್ಳಿ, ಮಾನಗಲ್ಲಿ, ದಂಡಿನಪಾಳ್ಯ ಸೇರಿ 50ಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲವಾಗಿದೆ.
ಸಂಚಾರಕ್ಕೆ ತೊಂದರೆ: ಕೆಂಪಸಾಗರ ಕೆರೆಯ ಏರಿಯ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿರುವುದರಿಂದ ಕೆಂಪಸಾಗರ ಗ್ರಾಮಸ್ಥರು ಹಾಲಶೆಟ್ಟಿಹಳ್ಳಿ, ಸಾತನೂರು ಗ್ರಾಮಕ್ಕೆ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ. ಕೋಡಿಯನ್ನು ವೀಕ್ಷಿಸಲು ನೂರಾರು ಮಂದಿ ಆಗಮಿಸುತ್ತಿರುವುದರಿಂದ ಏರಿಯ ಮೇಲೆ ತೆರಳಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಕ್ರಮಕ್ಕೆ ಒತ್ತಾಯ: ಕೆಂಪಸಾಗರ, ನಾರಸಂದ್ರ ಕೆರೆಗಳು ತುಂಬಿ ಕೋಡಿ ಬಿದ್ದಿರುವುದರಿಂದ ಯುವಕರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದು, ಈ ವೇಳೆ ಆಯತಪ್ಪಿದರೆ ಭಾರಿ ಅನಾಹುತ ಸಂಭವಿಸಲಿದೆ. ಕೆರೆ ಕೋಡಿಗಳ ಬಳಿ ನಾಗರಿಕರು ತೆರಳದಂತೆ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗೃತಾ ಕ್ರಮ ಕೈಗೊಳ್ಳದ ಕಾರಣ ಮುಂದೆ ಅನಾಹುತವಾಗುವ ಎಲ್ಲ ಲಕ್ಷಣಗಳು ಇವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆಂಪಸಾಗರ ಕೆರೆಯಲ್ಲಿ ಸಲ್ಪ ಪ್ರಮಾಣದಲ್ಲಿ ನೀರು ಲೀಕ್ ಆಗುತ್ತಿದೆ. ಇದರಿಂದ ಯಾವುದೆ ಅಪಾಯವಿಲ್ಲ, ಕೆರೆಯ ನೀರಿನ ಒಳಗೆ ಇಳಿದು ಕೆಲಸ ಮಾಡಬೇಕಿದೆ. ನೀರು ಕಡಿಮೆಯಾದ ನಂತರ ಕೆಲಸ ಮಾಡಲಾಗುವುದು. ಕೋಟ್ರೇಶ್, ಸಣ್ಣ ನೀರಾವರಿ ಇಲಾಖೆ ಎಇಇ ಕೆರೆ ಏರಿ, ತೂಬು ಬಿರುಕು ಮೂಡಿದೆ. ಇದರಿಂದ ಸಾಕಷ್ಟು ಪ್ರಮಾಣದ ನೀರು ಹೋಗುತ್ತಿರುವುದರಿಂದ ತಾತ್ಕಾಲಿಕವಾಗಿ ಜೆಸಿಬಿ ಮೂಲಕ ಮಣ್ಣನ್ನು ಮುಚ್ಚಲಾಗಿದೆ. ಆದರೂ, ನೀರನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಗಂಗಮ್ಮ ರಾಜಶೇಖರ್ ಉಪಾಧ್ಯಕ್ಷೆ ಗ್ರಾಪಂ ಸಾತನೂರು