ಕೆಂಪೇಗೌಡರು ಕೈಲಾಸಕ್ಕೆ ಹೋದ ಸ್ಥಳ ಕೆಂಪಾಪುರ

Published on

ಕೆರೆ,ಕಟ್ಟೆ, ಕಲ್ಯಾಣಿ, ದೇಗುಲಗಳ ಕೊಡುಗೆ - ವೀರಸಮಾಧಿ ಅಭಿವೃದ್ಧಿಗೆ ಬೇಕಿದೆ ಕಾಯಕಲ್ಪ

ಎಂ.ಎಸ್​.ಸಿದ್ದಲಿಂಗೇಶ್ವರ ಮಾಗಡಿ

ದೇಶದ ಹಳ್ಳಿಗಳು ತಮ್ಮದೆ ಆದ ವೈಶಿಷ್ಟ್ಯ ಮತ್ತು ಹೆಸರುಗಳನ್ನು ಹೊಂದಿದ್ದು, ಅಲ್ಲಿನ ಸ್ಥಳಿಯ ಆಚರಣೆಗಳು, ಬದುಕಿನ ಶೈಲಿ ಮತ್ತು ಸಾಂಸ್ಕೃತಿಕ ಪುರಾವೆಗಳು ಊರಿನ ಹೆಸರು ಮತ್ತು ಕಸುಬು, ಇತಿಹಾಸವನ್ನು ಹೊಂದಿವೆ. ಆ ಸಾಲಿಗೆ ತನ್ನದೇ ಆದ ಪ್ರಸಿದ್ಧಿ ಪಡೆದ ಮಾಗಡಿಯಿಂದ 14 ಕಿಲೋ ಮೀಟರ್​ ದೂರದ ಕೆಂಪೇಗೌಡರು ಐಕ್ಯವಾಗಿರುವ ಸ್ಥಳವೇ ಕೆಂಪಾಪುರ ಮತ್ತೊಂದು ವಿಶೇಷ ತಿಳಿಸುವ ಗ್ರಾಮವಾಗಿದೆ.

ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಅವರು ಕುಣಿಗಲ್​-ಮಾಗಡಿ ಗಡಿ ಭಾಗದ ತಾಳೇಕೆರೆ ಹ್ಯಾಂಡ್​ ಮೂಲಕ ಗಡಿ ರಕ್ಷಣೆಗೆಂದು ಹೊರಟಿದ್ದಾಗ ಯುದ್ಧ ನಡೆದು ಅದರಲ್ಲಿ ಗಾಯಗೊಂಡಿದ್ದ ಅವರನ್ನು ಕೆಂಪಾಪುರಕ್ಕೆ ಕರೆತರಲಾಗಿತ್ತು. ಆಗ ಈ ಊರಿನಲ್ಲಿ ಅಸುನೀಗಿದರು ಎಂದು ಇತಿಹಾಸ ಹೇಳುತ್ತದೆ. ಈ ನಿಟ್ಟಿನಲ್ಲಿ ಕೆಂಪೇಗೌಡರ ಸ್ಮಾರಕದ ಮೇಲೂ ಯುದ್ಧ ಮಾಡಿ ಕೈಲಾಸಕ್ಕೆ ಹೋದ ಸ್ಥಳ ಎಂದು ಬರೆಯಲಾಗಿದೆ.

ಶಾಸನದ ಸಾಲೇ ಸಾಕ್ಷಿ

ಸಮಾಧಿ ಮೇಲಿನ ಮಂಟಪದ ಮೇಲೆ ಹಿರಿಯ ಕೆಂಪೇಗೌಡಯ್ಯನವರು ಕುಣಿಗಲಿಂದ ಬಂದು ಬಳಿಯ (ಯೆ) ಜಗಳವಂನು ಮಾಡ ಅಯಿಕ್ಯವಾಗಿ ಕೈಲಾಸಕ್ಕೆ ಹೋದ ಸ್ಥಳ' ಎಂಬ ಬರಹವಿದೆ. ಈ ಬರಹವನ್ನು ಅವಲೋಕಿಸಿದಾಗ ಕೆಂಪಾಪುರದಲ್ಲಿ ನಡೆದ ಯುದ್ಧವೊಂದರಲ್ಲಿ ಹಿರಿಯ ಕೆಂಪೇಗೌಡರು ಇದೇ ಸ್ಥಳದಲ್ಲಿ ವೀರಮರಣ ಹೊಂದಿದರು ಎನ್ನುವುದು ತಿಳಿಯುತ್ತದೆ. ತಮ್ಮ ತಂದೆಯ ಸ್ಮರಣಾರ್ಥ ಇಮ್ಮಡಿ ಕೆಂಪೇಗೌಡರು ವೀರ ಸಮಾಧಿ ಕಟ್ಟಿಸಿದ್ದಾರೆಂಬುದು ಗ್ರಾಮದ ಹಿರಿಯರ ಮಾತಾಗಿದೆ.

ಕೆರೆಯಲ್ಲೊಂದು ಪುರಾವೆ

ಸ್ಮಾರಕದ ಬಳಿಯ ಕೆರೆಯಲ್ಲಿ ಶಾಸನವೊಂದು ಪತ್ತೆಯಾಗಿದೆ. ಆ ಶಾಸನದಲ್ಲಿ ಛತ್ರಿ ಹಿಡಿದು ನಿಂತಿರುವ ಹಿರಿಯ ಕೆಂಪೇಗೌಡರ ಚಿತ್ರದ ಕೆತ್ತನೆಯಿದೆ. ಜತೆಗೆ, ಅಶ್ವಾರೂಢ ಕೆಂಪೇಗೌಡರ ಚಿತ್ರಗಳು ಕಂಡುಬಂದಿವೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಇದು ಹಿರಿಯ ಕೆಂಪೇಗೌಡರದೇ ಸಮಾಧಿ ಎಂದು ರ್ನಿಣಯಕ್ಕೆ ಬರಲಾಗಿದೆ ಎಂಬುದು ರಾಜ್ಯ ಸರ್ಕಾರ ನೇಮಿಸಿದ ಸಂಶೋಧಕರ ತಂಡದ ವಾದವಾಗಿದೆ.

ಅಭಿವೃದ್ಧಿ ಕೆಲಸ

ರಾಜ್ಯ ಸರ್ಕಾರ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಅಭಿವೃದ್ಧಿಗೆ 50 ಕೋಟಿ ರೂ. ಮೀಸಲಿಟ್ಟು ಸಮಗ್ರ ಅಭಿವೃದ್ಧಿಗೆ ನೀಲನೆ ತಯಾರಿಸಿ ಗ್ರಾಮವನ್ನು ಭೂಸ್ವಾಧಿನ ಪಡಿಸಿಕೊಂಡು ಮತ್ತೆ 10 ಎಕರೆ ಭೂಸ್ವಾಧಿನ ಪಡಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಸ್ಥಳಿಯ ಜನರು ನಮಗೆ 5 ರಿಂದ 10 ಗುಂಟೆ ಜಾಗ ಉಳಿದಿದೆ, ಸುಮಾರು 300 ವರ್ಷಗಳಿಂದ ಇಲ್ಲಿ ಬಾಳಿ ಬದುಕಿದ್ದೇವೆ. ನಾವು ಜಾಗ ನೀಡುವುದಿಲ್ಲ ಇರುವ ಜಾಗದಲ್ಲಿ ಅಭಿವೃದ್ಧಿ ಪಡಿಸಿ ಎನ್ನುತ್ತಿದ್ದಾರೆ. ಗ್ರಾಮವನ್ನು ಬೇರೆಡೆ ಸ್ಥಳಾಂತರಗೊಳಿಸಲು ಗೋಮಾಳದ 5 ಎಕರೆ ಜಾಗ ಗುರುತಿಸಲಾಗಿದೆ. ಆದರೆ ಇದನ್ನು ಅಭಿವೃದ್ಧಿಪಡಿಸಿ ಇಲ್ಲಿನ ಜನರಿಗೆ ಹಕ್ಕು ಪತ್ರ ನೀಡಿಲ್ಲ. ಇದರಿಂದ ಗ್ರಾಮದ 60 ಕುಟುಂಬಗಳು ಮನೆ ನಿರ್ಮಿಸಿಕೊಳ್ಳಲು ಜಾಗ ಇಲ್ಲದೆ ಹಳೆಯ ಶಿಥಿಲಗೊಂಡ ಮನೆಯಲ್ಲಿ ಜೀವನ ಮಾಡುವ ಸಂಕಷ್ಟದಲ್ಲಿದ್ದಾರೆ.

ಕಥೆ ಹೇಳುವ ಕಲ್ಲಿನ ಕಂಬಗಳು

ಕೆಂಪಾಪುರದಲ್ಲಿರುವ ನಾಲ್ಕು ಕಾಲಿನ ಮಂಟಪಗಳ ಮೇಲೆ ಹಿರಿಯ ಕೆಂಪೇಗೌಡರು ಗಂಗಾಗೌರಿ ಸಂವಾದ ಕವಿತೆ ಬರೆಯುತ್ತಿರುವ ಕೆತ್ತನೆ. ಶಿವಲಿಂಗ, ನಂದಿ, ವೀರಭದ್ರ, ಸುಬ್ರಹ್ಮಣ್ಯ, ಗಣಪತಿಯ ಕೆತ್ತನೆಗಳನ್ನು ಕಾಣಬಹುದು. ಕೆಂಪೇಗೌಡರು ಕೆಂಪಾಪುರದಲ್ಲಿ ಸುಂದರ ಬಸವಣ್ಣ ದೇವಾಲಯ, ಕೆರೆ, ಮುಡುಡೇಗೌಡನ ಪಾಳ್ಯದ ಬಳಿ ಸುಂದರ ಕಲ್ಯಾಣಿ ನಿರ್ಮಿಸಿದ್ದಾರೆ. ಬಸವಣ್ಣ ದೇವಾಲಯ ಶಿಥಿಲವಾದ ಹಿನ್ನೆಲೆಯಲ್ಲೆ ಗ್ರಾಮಸ್ಥರು ಪುನರ್​ ಜಿಣೋರ್ದ್ಧಾರಗೊಳಿಸಿರುವುದನ್ನು ಬಿಟ್ಟರೆ ಕೆರೆ, ಕಲ್ಯಾಣಿ ಮತ್ತು ವೀರಸಮಾಧಿ ಅಭಿವೃದ್ಧಿಗೆ ಸರ್ಕಾರ ಮುಂದಾಗಿಲ್ಲ. ಗ್ರಾಮದ ಕೆಂಪೇಗೌಡರ ವೀರಸಮಾಧಿ ಪತ್ತೆಯಾಗಿ ಸುಮಾರು 7 ವರ್ಷ ಕಳೆದಿದೆ. ಆ ವೇಳೆ ಮಾಜಿ ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಹಲವು ಮಠಾಧ್ಯಕ್ಷರು ಭೇಟಿ ನೀಡಿ ವೀಸಿ ಈ ಸ್ಥಳವನ್ನು ವಿಶ್ವಪಾರಂಪರಿಕ ಸ್ಥಳವನ್ನಾಗಿ ಮಾಡಲಾಗುವುದು ಎಂದು ಹೋದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.

ಮಾತಲ್ಲೇ ಉಳಿದ ಅಭಿವೃದ್ಧಿ

ಬೆಂಗಳೂರಿನಲ್ಲಿ ನಡೆಯುವ ಕೆಂಪೇಗೌಡರ ಜಯಂತಿಗೆ ಕೆಂಪಾಪುರದಿಂದ ಪ್ರತಿವರ್ಷ ಜ್ಯೋತಿ ಕೊಂಡೊಯ್ಯಲಾಗುತ್ತಿದೆ. ಈ ವೇಳೆ ಕೆಂಪಾಪುರ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂಬ ಭರವಸೆ ಬರುತ್ತದೆ. ಅದು ಭರವಸೆಯಾಗಿಯೇ ಉಳಿಯುತ್ತದೆ.

ಜನರಿಗೆ ಪರ್ಯಾಯ ವ್ಯವಸ್ಥೆ ನೀಡಲಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು ಜಿಲೆಯವರು ಮತ್ತು ಕೆಂಪೇಗೌಡರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಈಗಾಲಾದರೂ ಅಭಿವೃದ್ಧಿಗೆ ಕಾಯಕಲ್ಪ ನೀಡುವರೆ ಎಂಬುದನ್ನು ಕಾದುನೋಡಬೇಕಾಗಿದೆ. ನಾಡಿಗೆ ಬೆಳಕಾದ ಕೆಂಪೇಗೌಡರ ಸ್ಮಾರಕದ ಸಮಗ್ರ ಅಭಿವೃದ್ಧಿಗೆ ಗ್ರಾಮದ ಮನೆ, ಜಾಗವನ್ನು ಸರ್ಕಾರ ಭೂಸ್ವಾಧಿನ ಮಾಡಿಕೊಂಡಿದೆ. ಆದರೆ, ಅವರಿಗೆ ಪರ್ಯಾಯ ನಿವೇಶನ ನೀಡದೆ ಸಂಕಷ್ಟದ ಪರಿಸ್ಥತಿಯಲ್ಲಿ ಇಲ್ಲಿನ ಜನ ಇರುವುದು ಬೇಸರದ ಸಂಗತಿ.

ಚಿಕ್ಕಮುದಿಗೆರೆ ಗ್ರಾ.ಪಂ. ಹಣ ಖರ್ಚು ಮಾಡಿ ಪ್ರತಿ ವರ್ಷ ಗ್ರಾಮದಿಂದ ಜ್ಯೋತಿ ತೆಗೆದುಕೊಂಡು ಕೆಂಪೇಗೌಡ ಜಯಂತಿ ಆಚರಿಸುವುದರಲ್ಲೆ ಕಾಲಹರಣ ನಡೆಯುತ್ತಿದೆ. ರಸ್ತೆ ಅಗಲೀಕರಣ, ತಿಪ್ಪಸಂದ್ರ ಹ್ಯಾಂಡ್​ಪೋಸ್ಟ್​ ಮತ್ತು ಕೆಂಚನಹಳ್ಳಿ ಬಳಿ ಕೆಂಪೇಗೌಡ ಪ್ರತಿಮೆ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಅನೇಕ ವರ್ಷದ ಕೂಗಾಗಿದೆ. ಅದು ಕೂಡ ಈಡೇರದೆ ಇರುವುದರಿಂದ ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ.

ಕೆಂಪೇಗೌಡರ ವೀರಸಮಾಧಿ ಅಭಿವೃದ್ಧಿಗೆ ಸಂಸದರ ಸಹಕಾರದಿಂದ 50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇಲ್ಲಿನ ಜನರಿಗೆ ಒದಗಿಸಬೇಕಾದ ಸವಲತ್ತು ನೀಡಲಾಗುವುದು. ಸಮಾಧಿ ಸ್ಥಳವನ್ನು ಇಷ್ಟು ವರ್ಷ ಕಾಪಾಡಿಕೊಂಡು ಬಂದಿರುವ ಗ್ರಾಮಸ್ಥರಿಗೆ ಅಭಿನಂದನೆ ತಿಳಿಸುತ್ತೇನೆ. ಅವರ ಸಹಕಾರ, ಸಲಹೆ ಪಡೆದು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡುತ್ತೇನೆ.

ಎಚ್​.ಸಿ.ಬಾಲಕೃಷ್ಣ, ಶಾಸಕ

ಸಂಸದರು ಮತ್ತು ಶಾಸಕರು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿ, ಹಕ್ಕುಪತ್ರ ವಿತರಿಸಿ ಮನೆ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಅನುದಾನ ನೀಡಿ ಐಕ್ಯಸ್ಥಳವನ್ನು ಇರುವ ಜಾಗದಲ್ಲೆ ಶ್ರೀ ಅಭಿವೃದ್ಧಿಪಡಿಸಬೇಕು. ಶಿಥಿಲಗೊಂಡ ಮನೆಯಿಂದ ಏನಾದರೂ ಅನಾಹುತವಾದರೆ ತಾಲೂಕು ಆಡಳಿತವೆ ನೇರ ಹೊಣೆ.

ಕೆ.ಎಚ್​.ಹರೀಶ್​ ಗ್ರಾ.ಪಂ. ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net