ಇಂದಿನ ಪ್ರಜಾಪ್ರಭುತ್ವಕ್ಕಿಂತ ದಕ್ಷತೆಯಿಂದ ಕೂಡಿದ್ದ ಕೆಂಪನಂಜಮ್ಮಣ್ಣಿ ಆಡಳಿತ: ಲೇಖಕ ಡಾ. ಕೆ.ಎನ್. ಗಣೇಶಯ್ಯ

wadia
Published on

ಬೆಂಗಳೂರು ರಾಜಮಾತೆ ಕೆಂಪನಂಜಮ್ಮಣ್ಣಿ ಅವರ ಆಡಳಿತವು ರಾಜಾಡಳಿತವಾಗಿದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆ ಇತ್ತು. ಆದರೆ, ಇಂದಿನ ರಾಜಕೀಯ ವ್ಯವಸ್ಥೆಗಿಂತ ಮಿಗಿಲಾಗಿ ಹತ್ತಾರು ಶಾಶ್ವತ ಕಾರ್ಯಗಳನ್ನು ಮಾಡಿದ್ದರು ಎಂದು ಲೇಖಕ ಡಾ. ಕೆ.ಎನ್. ಗಣೇಶಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಅಂಕಿತ ಪುಸ್ತಕವು ಬುಕ್ ಬ್ರಹ್ಮದ ಸಹಯೋಗದಲ್ಲಿ ಶನಿವಾರ ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ವರ್ಲ್ಡ್ ಕಲ್ಚರ್‌ನಲ್ಲಿ ಲೇಖಕ ಡಾ. ಗಜಾನನ ಶರ್ಮ ರಚನೆಯ ‘ರಾಜಮಾತೆ ಕೆಂಪನಂಜಮ್ಮಣ್ಣಿ’ ಕೃತಿ ಬಿಡುಗಡೆಯಲ್ಲಿ ಅವರು ಮಾತನಾಡಿದರು.

ಗಜಾನನ ಶರ್ಮ ಅವರು ಓದುಗನ ಹಸಿವನ್ನು ಅರ್ಥಮಾಡಿಕೊಂಡಿದ್ದಾರೆ. ಇದು ಕೇವಲ ರಾಜಮಾತೆ ಕೆಂಪನಂಜಮ್ಮಣ್ಣಿ ಅವರ ಆತ್ಮಕತೆಯಲ್ಲ, ಅವರ ಚರಿತ್ರೆಯಲ್ಲ, ಏಳು ವರ್ಷಗಳ ಕಾಲದಲ್ಲಿ ಮೈಸೂರಿನ ರಾಜಕಾರಣ, ಕುಟುಂಬ ಜೀವನ, ಆಡಳಿತ ವ್ಯವಸ್ಥೆ ಇಡೀ ಸಮಸ್ತವಾಗಿ ಆ ಚರಿತ್ರೆ ಹೇಗಿತ್ತು ಎಂಬುವುದನ್ನು ಈ ಕೃತಿ ಕಟ್ಟಿಕೊಡುತ್ತದೆ ಎಂದರು.

ಒಬ್ಬ ರಾಣಿಯ ವಿರುದ್ಧ ಪತ್ರಿಕೆಗಳಲ್ಲಿ ಬರೆಯುವುದು ಅಸಾಧ್ಯದ ಮಾತು. ಆದರೆ, ಇಂತಹದ್ದೊಂದು ಸ್ವತಂತ್ರ ರಾಜರ ಆಡಳಿತದಲ್ಲಿ ಇತ್ತು. ಆದರೆ, ಅಂತಹ ಅಧಿಕಾರ ಇಂದಿನ ಪ್ರಜಾಪ್ರಭುತ್ವದಲ್ಲಿಲ್ಲ. ರಾಜಕಾರಣಿಗಳ ವಿರುದ್ಧವಾಗಿ ಏನನ್ನಾದರೂ ಪತ್ರಿಕೆಯಲ್ಲಿ ಪ್ರಕಟಿಸಿದರೆ, ಮರುಕ್ಷಣವೇ ಮನೆಯ ಮುಂದೆ ಪೊಲೀಸರು ಬಂದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಕರ್ತ ಜೋಗಿ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಚರಿತ್ರೆಯನ್ನು ಇಂದಿನ ರಾಜಕೀಯ ಸಿದ್ಧಾಂತಕ್ಕೆ ತಕ್ಕಂತೆ ಮರುರೂಪಿಸುವ ಕೆಲಸವಾಗುತ್ತಿದೆ. ಇಂತಹ ಬದಲಾವಣೆಗಳು ಬೇರೆ ಬೇರೆ ದೇಶಗಳಲ್ಲಿಯೂ ನಡೆಯುತ್ತಿದೆ. ಒಂದು ಚರಿತ್ರೆಯನ್ನು ಮತ್ತೆ ಮುರಿದು ಕಟ್ಟುವುದು, ಮರು ರೂಪಿಸುವಾಗ ತನಗೆ ಬೇಕಾದಂತೆ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಇದರಿಂದ ನೈಜ ಚರಿತ್ರೆಯನ್ನು ತಿಳಿಯದ ಸ್ಥಿತಿಯಾಗಿದೆ. ಎಡ ಮತ್ತು ಬಲ ಪಂಥೀಯ ಕೃತಿಗಳು ಬಂದಾಗ, ಒಬ್ಬನೇ ವ್ಯಕ್ತಿ ಒಳ್ಳೆಯ ಹಾಗೂ ಕೆಟ್ಟ ದೃಷ್ಟಿಕೋನವಾಗಿ ಕಾಣುತ್ತಾನೆ ಎಂದರು.

ತರಾಸು ಸೇರಿ ಅನೇಕ ಲೇಖಕರು ಐತಿಹಾಸಿಕ ಕಾದಂಬರಿಗಳು ಹಾಗೂ ರಾಜಮನೆತನದ ಬಗ್ಗೆ ಬರೆದಿದ್ದಾರೆ. ಇಂತಹ ಸಮಯದಲ್ಲಿ ರೋಚಕತೆಯನ್ನು ಸೇರಿಸುತ್ತಾರೆ. ಸತ್ಯ, ಅಸತ್ಯ ಗೊತ್ತಾಗುವುದಿಲ್ಲ. ಹೈದರಾಲಿ ಒಳ್ಳೆಯಯವನ, ಕೆಟ್ಟವನ ಎಂದು ತೀರ್ಮಾನಿಸದ ಸ್ಥಿತಿಯನ್ನು ಚರಿತ್ರೆ ನಿರ್ಮಿಸಿದೆ. ಟಿಪ್ಪು ಬಗ್ಗೆ ಹೇಳಿದರೆ ನೂರು ವಾದಗಳು ಬರಲಿವೆ. ಆದರೆ, ಈ ಕೃತಿ ವಾಸ್ತವ ಸ್ಥಿತಿಗಳನ್ನು ತಿಳಿಸುತ್ತದೆ ಎಂದು ಹೇಳಿದರು.

ಲೇಖಕ ಡಾ. ಗಜಾನನ ಶರ್ಮ ಮಾತನಾಡಿ, ಪ್ರಾಥಮಿಕ ಶಿಕ್ಷಣವನ್ನು ಮಾತ್ರ ಪಡೆದಿದ್ದ ರಾಜಮಾತೆ ಅವರು ಅಂದಿನ ಕಾಲದಲ್ಲಿಯೇ ಮೈಸೂರಿನಲ್ಲಿ ಹಲವಾರು ಮಹತ್ವದ ಬದಲಾವಣೆಗಳನ್ನು ತಂದಿದ್ದರು. ಚಿತ್ರದುರ್ಗದ ವಾಣಿವಿಲಾಸ ಸಾಗರ, ಐಐಎಸ್‌ಸಿ, ಹೆಸರುಘಟ್ಟದಿಂದ ಮಲ್ಲೇಶ್ವರಕ್ಕೆ ನೀರಿನ ಪೈಪ್‌ಲೈನ್ ಯೋಜನೆ, ಬಸವನಗುಡಿ ಬಡಾವಣೆ ಸೇರಿ ಹಲವಾರಿ ಕಾರ್ಯಗಳನ್ನು ಕೈಗೊಂಡಿದ್ದರು. ನಿಜಕ್ಕೂ ಅವರ ಕನಸುಗಳು, ಭಾರತದಲ್ಲಿ ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಯನ್ನು ಕಟ್ಟಿಸಲು ಅವರು ನೀಡಿದ ಕೊಡುಗೆ ಶ್ಲಾಘನೀಯ ಎಂದರು.

ಮಹಾರಾಣಿ ಅವರು ಅಂದಿನ ಕಾಲಘಟ್ಟದಲ್ಲಿ ಮಾಡಿದಂತಹ ಕೆಲಸವನ್ನು ಇಂದಿನ ಜನರ ಹೃದಯಕ್ಕೆ ತಲುಪಿಸುವ ಕೆಲಸವನ್ನು ಶರ್ಮ ಮಾಡಿದ್ದಾರೆ. ಈ ಕೃತಿಯನ್ನು ಓದಿದಾಗ ನಮ್ಮ ಮುಂದೆಯೇ ಘಟನೆಗಳು ನಡೆಯುತ್ತಿದೆ ಅನ್ನುವಂತಹ ಚಿತ್ರಣ ಮನದಲ್ಲಿ ಮೂಡುತ್ತದೆ. ಇದರಲ್ಲಿ ಯಾವುದೇ ರೀತಿಯ ಉತ್ಪ್ರೇಕ್ಷೆಯಿಲ್ಲ, - ರಾಜಾಚಂದ್ರ ಅರಸ್, ಜಯಚಾಮರಾಜೇಂದ್ರ ಒಡೆಯರ್ ಅಳಿಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net