

ಬೆಂಗಳೂರು: ಪೂರ್ವಾಗ್ರಹಪೀಡಿತ ಅಂಶಗಳನ್ನು ಹೆಚ್ಚು ಆವಾಹನೆ ಮಾಡಿಕೊಳ್ಳುತ್ತ ಹೋದಂತೆ ಮನಸ್ಸು ಕಲ್ಮಶವಾಗುತ್ತದೆ. ಋಣಾತ್ಮಕ ಸಂಗತಿಗಳನ್ನು ವಿಸರ್ಜನೆ ಮಾಡಿದಷ್ಟೂ ಉತ್ತಮ ಮನುಷ್ಯರಾಗಲು ಸಾಧ್ಯವಿದೆ ಎಂದು ಹಿರಿಯ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕೆಟೇಶ್ ಹೇಳಿದ್ದಾರೆ.
ಸಮನ್ವಿತ ಪ್ರಕಾಶನ ಬನಶಂಕರಿಯ ಸುಚಿತ್ರಾ ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ಪತ್ರಕರ್ತ ರಾಜಶೇಖರ ಜೋಗಿನ್ಮನೆ ಅವರ "ಕೇಳು ಧನಂಜಯ' ಕಾದಂಬರಿ ಹಾಗೂ ಮರುಮುದ್ರಣಗೊಂಡ 'ಬಿಂಗಿ', 'ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ' ಕಥಾಸಂಕಲನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾದಂಬರಿಯಲ್ಲಿ ಚರಿತ್ರೆ ಎನ್ನುವುದು ಕಥೆಯ ವ್ಯಕ್ತಿ, ಸಂದರ್ಭ ಹಾಗೂ ಟನೆಗಳೊಂದಿಗೆ ಹಾಸುಹೊಕ್ಕಾಗಿದೆ. ಬದುಕು ಎಂಬುದು ಸಂಕೀರ್ಣ ಜಗತ್ತಾಗಿದ್ದು, ಮೇಲ್ನೋಟಕ್ಕೆ ಕಾಣಿಸುವಷ್ಟು ತಿಳಿದಷ್ಟು ಸರಳವಾಗಿಲ್ಲ. ವರ್ತಮಾನ ಕಾಲದಲ್ಲಿ ನಾವಿಂದು ಹಣ, ಅಧಿಕಾರ, ಸಂಪತ್ತಿಗೆ ಹೆಚ್ಚಿನ ಪ್ರಾಧ್ಯಾನತೆ ಕೊಟ್ಟಿದ್ದೇವೆ. ಇವುಗಳು ನಮ್ಮೊಳಗೆ ಹುಟ್ಟಿಸುವ ಸ್ವಾರ್ಥಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ಲೋಕಾರ್ಥ ಜಗತ್ತು ಮನುಷ್ಯನನ್ನು ಯಾವ ಹಂತದವರೆಗೆ ನಿರ್ಮಾಣ ಮಾಡುತ್ತದೆ ಎಂಬುದನ್ನು ಈ ಕಾದಂಬರಿ ತಿಳಿಸಿಕೊಡುತ್ತದೆ ಎಂದರು.
ಲೋಕಾರ್ಥ ಹಾಗೂ ಪರಾರ್ಥ ಎರಡೂ ಸಮನ್ವಯಗೊಳಿಸಿ ಬದುಕನ್ನು ನೋಡಬೇಕು. ಭವಿಷ್ಯ ಜಗತ್ತು ಹೇಗಿರಲಿದೆ ಎಂಬುದಕ್ಕೆ ಉದಾಹರಣೆಗಳು ನಮ್ಮ ಮುಂದಿವೆ. ಭವಿಷ್ಯ ಜಗತ್ತು ನಿರ್ಮಾಣವಾಗಬೇಕಾದರೆ ವರ್ತಮಾನ ಮತ್ತು ಭೂತಕಾಲದ ಸಂಗತಿಗಳನ್ನು ಒಟ್ಟಾಗಿ ನೋಡಬೇಕು. ಆದರೆ ಇಂದು ಮನುಷ್ಯನ ನಡುವಿನ ನಂಬಿಕೆಗಳು ಅಂತರ ಕಾಯ್ದುಕೊಳ್ಳುತ್ತಿವೆ. ಸಂಬಂಧಗಳು ಹಳಸಿದ್ದು, ಸ್ನೇಹ ಎಂಬುದು ಇಲ್ಲವಾಗಿದೆ. "ಇಲ್ಲ' ಎಂಬ ಜಗತ್ತಿನಲ್ಲಿ ನಾವಿದ್ದಾಗ ಸಮೃದ್ಧವಾದ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದು ಎಂಬುದನ್ನು ಈ ಕಾದಂಬರಿ ನಿರೂಪಿಸುತ್ತದೆ ಎಂದು ವಿಶ್ಲೇಷಿಸಿದರು.
ಹಿರಿಯ ಪರ್ತಕರ್ತ ರವೀಂದ್ರ ಭಟ್ಟ ಮಾತನಾಡಿ, ಮೊಬೈಲ್ ಯುಗದಲ್ಲಿ ಕಲ್ಪನಾ ಜಗತ್ತು ಇಲ್ಲದಂತಾಗಿದೆ. ಯೋಚನೆಯನ್ನು ವಿಸ್ತಾರ ಮಾಡಿಕೊಳ್ಳುವ ಕಾಲ ಈಗಿಲ್ಲ. ಇತಿಹಾಸದ ಸಂಗತಿಗಳು ಇಂದಿನ ತಲೆಮಾರಿಗೆ ಯಾಕೆ ಮುಖ್ಯವಾಗುತ್ತದೆ ಎಂಬುದನ್ನು "ಕೇಳು ಧನಂಜಯ' ಕಾದಂಬರಿ ತಿಳಿಸಿಕೊಡುತ್ತದೆ ಎಂದು ಹೇಳಿದರು.
'ಕೇಳು ಧನಂಜಯ' ಕಾದಂಬರಿ ಹುಟ್ಟೂರಿನಲ್ಲಿ ಕೇಳಿದ ಕಥೆ, ಇಂದಿನ ಶತಮಾನದಲ್ಲಿ ಹೇಗಿರಬಹುದು ಎಂಬುದನ್ನು ಊಹಿಸಿಕೊಂಡು ಬರೆಯಲಾಗಿದೆ. ಒಂದಷ್ಟು ವೈಭವ ಹಾಗೂ ವಿನಾಶದ ಸಂಗತಿಗಳನ್ನು ಇದರಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. -ರಾಜಶೇಖರ ಜೋಗಿನ್ಮನೆ, ಕಾದಂಬರಿಕಾರ
'ಕೇಳು ಧನಂಜಯ' ಮಾಹಿತಿಪೂರ್ಣ ಮೌಲಿಕ ಕಾದಂಬರಿ. ಇದಲ್ಲಿ ಮಲೆನಾಡು, ಕೂಡು ಕುಟುಂಬ, ಬಿದಿರು, ಪ್ಲೇಗ್ ಅನಾಹುಗಳು, ಗೋತ್ರ ಪದ್ಧತಿ, ಇಲಿಗಳ ಪುರಾಣ, ಬೀಜಗಳ ರಕ್ಷಣೆ, ಅವಧೂತರು, ರಾಮಾಯಣದ ಹುಟ್ಟು, ಭೂಮಿಯ ಹುಟ್ಟು, ಚಕ್ರಗಳು, ಸೋದೆಯ ಅರಸರು, ಚನ್ನಬೈರಾದೇವಿ, ರೋಮನ್ನರ ಕಾಲದಲ್ಲಿ ಕಾಳುಮೆಣಸಿನ ವಹಿವಾಟು, ಭಾರತದಲ್ಲಿ ಪೋರ್ಚುಗೀಸರು, ಯಕ್ಷಗಾನ, ನದಿಗಳ ಇತಿಹಾಸ, ಸಂಗೀತದ ಇತಿಹಾಸ, ಭಾರತಕ್ಕೆ ಚಹಾ ಆಗಮನ, ಕಾಶಿಯ ವಿವರ& ಹೀಗೆ ಹಲವು ಆಯಾಮಗಳಲ್ಲಿ ಕಥಾವಸ್ತುವಿನ ನಿರೂಪಣೆ ನೋಡಬಹುದು ಎಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಹೇಳಿದರು.