ಲಿಂಗಪತ್ತೆ ಕೇಂದ್ರಗಳ ಮೇಲಿರಲಿ ನಿಗಾ

28cbp1 Fotojet
Published on

ಚಿಕ್ಕಬಳ್ಳಾಪುರ: ಲಿಂಗಪತ್ತೆ ಕೇಂದ್ರಗಳ ಚಲನವಲನಗಳ ಮೇಲೆ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಪ್ರಸವಪೂರ್ವ ಮತ್ತು ಗರ್ಭಪೂರ್ವ ಲಿಂಗಪತ್ತೆ ತಂತ್ರಗಳ ಕುರಿತು ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾವುದೇ ಕಾರಣಕ್ಕೂ ಅಕ್ರಮ ಲಿಂಗಪತ್ತೆ ಕಾರ್ಯಗಳಲ್ಲಿ ತೊಡಗಬಾರದು. ಒಂದು ವೇಳೆ ಗರ್ಭಿಣಿಯರು ಮತ್ತು ಜನರು ಲಿಂಗ ಪತ್ತೆ ಮಾಹಿತಿಯನ್ನು ಪಡೆಯಲು ಒತ್ತಾಯಿಸಿದರೆ ತಕ್ಷಣ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಬೇಕು. ಹಾಗೆಯೇ ಮೇಲಧಿಕಾರಿಗಳು ಸ್ಥಳೀಯ ಪೊಲೀಸರ ನೆರವಿನೊಂದಿಗೆ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರತಿಯೊಬ್ಬರ ಸಹಕಾರ, ಪ್ರಾಮಾಣಿಕ ಸ್ಪಂದನೆಯಿಂದ ಲಿಂಗಾನುಪಾತದ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಆರ್‌ಸಿಎಚ್ ಅಧಿಕಾರಿ ಡಾ. ಸಂತೋಷ್ ಬಾಬು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ ರೆಡ್ಡಿ, ವಕೀಲರಾದ ಸುಧಾಕರ್ ಮತ್ತಿತರರು ಇದ್ದರು.

42 ಸ್ಕ್ಯಾನಿಂಗ್ ಕೇಂದ್ರಗಳು

ಜಿಲ್ಲೆಯಲ್ಲಿ 9 ಸರ್ಕಾರಿ ಹಾಗೂ 34 ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳು ನೋಂದಣಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಕೇಂದ್ರಗಳ ಮಾಲೀಕರು, ಮುಖ್ಯಸ್ಥರು, ವೈದ್ಯರು, ರೇಡಿಯಾಲಾಜಿಸ್ಟ್‌ಗಳಿಗೆ ನಿಯಮ ಪಾಲನೆ, ದಾಖಲೆಗಳ ನಿರ್ವಹಣೆಯ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಭ್ರೂಣಲಿಂಗ ಪತ್ತೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ದಾಖಲೆ ಸಮೇತ ಸ್ಕ್ಯಾನಿಂಗ್ ವಿವರವನ್ನು ಹೊಂದಿರಬೇಕು. ಅನಿರೀಕ್ಷಿತ ಪರಿಶೀಲನೆಯ ಸಂದರ್ಭದಲ್ಲಿ ಪಿಸಿ ಆಂಡ್ ಪಿಎನ್‌ಡಿಟಿ ತಂಡಕ್ಕೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.

ಸರಾಸರಿ ಲಿಂಗಾನುಪಾತ

ಜಿಲ್ಲೆಯಲ್ಲಿ 2022-23ರಲ್ಲಿ ಲಿಂಗಾನುಪಾತದ ಪ್ರಮಾಣ 870 ಇತ್ತು. ಪ್ರಸಕ್ತ 2023-24ರಲ್ಲಿ 936ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸಕಾರಾತ್ಮಕ ಬೆಳವಣಿಗೆ ಸಮಾಧಾನಕರವಾಗಿದ್ದರೂ 1000 ಪುರುಷರಿಗೆ 1000 ಮಹಿಳೆಯರು ಇರುವಂತಹ ಲಿಂಗಾನುಪಾತ ಸೃಷ್ಟಿಸಲು ಶ್ರಮಿಸಲಾಗುತ್ತದೆ. ಪ್ರಸ್ತುತ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ 1000 ಪುರುಷರಿಗೆ 1026 ಮಹಿಳಾ ಮತದಾರರು ಇದ್ದಾರೆ. ಅದೇರೀತಿ ಜನಸಂಖ್ಯೆ ಪ್ರಮಾಣದಲ್ಲೂ ಹೆಚ್ಚಳದ ಗುರಿ ಹೊಂದಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net