

ಪ್ರಶಾಂತ ರಿಪ್ಪನ್‌ಪೇಟೆ, ಬೆಂಗಳೂರು : ‘‘ಸೌರಾಷ್ಟ್ರೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನಮ್, ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್, ಪರ್ಲ್ಯಾಂ ವೈದ್ಯನಾಥಂಚ ಢಾಕಿನ್ಯಾಂ ಭೀಮ ಶಂಕರಮ್,
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ, ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ, ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ.
ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ, ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ.’
ಸಪ್ತ ಜನ್ಮಗಳ ಪಾಪಗಳನ್ನು ನಾಶ ಮಾಡುವ ಶಕ್ತಿ ಇರುವ ದ್ವಾದಶ ಜ್ಯೋತಿರ್ಲಿಂಗಗಳು ಭಾರತದ ಧಾರ್ಮಿಕ ಸಂಸ್ಕೃತಿಯ ಹೆಗ್ಗುರುತುಗಳು. ಜಾತಿ, ಮತ, ಭಾಷೆ, ಪ್ರದೇಶ ಎಂಬ ಎಲ್ಲ ಭೇದಗಳನ್ನು ಬದಿಗೊತ್ತಿ ಸರ್ವರಲ್ಲಿ ಸಾಮರಸ್ಯ ಮತ್ತು ಸಮನ್ವಯವನ್ನು ಸಾಧಿಸುವಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಮಹಾ ಶಿವರಾತ್ರಿಯ ಪರ್ವಕಾಲದಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಹನ್ನೊಂದನೆಯದಾದ ಶ್ರೀ ಕೇದಾರನಾಥ ಕ್ಷೇತ್ರದ ಕುರಿತು ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.
ಹಿಮಾಲಯದಲ್ಲಿರುವ ಕೇದಾರನಾಥ ಜ್ಯೋತಿರ್ಲಿಂಗವು ಸ್ವರ್ಗಕ್ಕೆ ದಾರಿ ತೋರುವ ಮಾರ್ಗ ಎಂದೇ ಪ್ರಸಿದ್ಧವಾಗಿದೆ. ದ್ವಾಪರಯುಗದಲ್ಲಿ ಪಾಂಡವರು ಯುದ್ಧದ ನಂತರ ಶಿವನನ್ನು ಅರಸುತ್ತ ಹೊರಟಾಗ ಅವರನ್ನು ಪರೀಕ್ಷೆ ಮಾಡಲು ಶಿವನು ನಂದಿಯ ಅವತಾರದಲ್ಲಿ ಕಾಣಿಸುತ್ತಾನೆ. ಇದನ್ನು ಗಮನಿಸಿದ ಭೀಮ ನಂದಿಯನ್ನು ಹಿಡಿಯಲು ಮುಂದಾದಾಗ ಕೇವಲ ಬೆನ್ನಿನ ಭಾಗ ಮಾತ್ರ ಸಿಕ್ಕು ಇನ್ನುಳಿದ ಭಾಗ ಭೂಗರ್ಭವಾಗುತ್ತದೆ. ತುಂಗನಾಥದಲ್ಲಿ ತೋಳುಗಳು, ರುದ್ರನಾಥದಲ್ಲಿ ಮುಖ, ಮಧ್ಯಮಹೇಶ್ವರದಲ್ಲಿ ನಾಭಿ, ಹೊಟ್ಟೆ, ಕಲ್ಪೇಶ್ವರದಲ್ಲಿ ಕೂದಲು ಕಾಣಿಸಿಕೊಳ್ಳುತ್ತವೆ ಆ 5 ಕ್ಷೇತ್ರಗಳಲ್ಲಿ ಪಾಂಡವರು ದೇವಾಲಯ ನಿರ್ಮಿಸಿದ್ದು ಪಂಚಕೇದಾರ ಎಂದು ಪ್ರಸಿದ್ಧವಾಗಿವೆ.
ಕೇದಾರನಾಥನ ದೇವಾಲಯವು 6 ತಿಂಗಳು ತೆರೆದಿದ್ದರೆ; ಇನ್ನಾರು ತಿಂಗಳು ಮುಚ್ಚಲ್ಪಟ್ಟಿರುತ್ತದೆ. ದೀಪಾವಳಿಯಲ್ಲಿ ಬಾಗಿಲು ಮುಚ್ಚಿದ ನಂತರ ಕೇದಾರನಾಥ ಉತ್ಸವಮೂರ್ತಿಯು ಪಂಚಪೀಠಗಳಲ್ಲಿ ಒಂದಾದ ವೈರಾಗ್ಯಸಿಂಹಾಸನ ಊಖಿಮಠದ ಓಂಕಾರೇಶ್ವರ ಮಂದಿರದಲ್ಲಿ ಪ್ರಸ್ಥಾನಗೊಂಡು ಪೂಜೆಗೊಳ್ಳುತ್ತದೆ. ಕೇದಾರ ಜಗದ್ಗುರುಗಳು ರಾವಲ್‌ರಾಗಿ ಪಂಚಕೇದಾರಗಳ ಪೂಜಾ ಅಧಿಕಾರವನ್ನು ಹೊಂದಿರುತ್ತಾರೆ. ಶಿವರಾತ್ರಿಯಂದು ಕೇದಾರನಾಥನ ಬಾಗಿಲು ತೆರೆಯುವ ದಿನಾಂಕ ನಿಗದಿಯಾಗುತ್ತದೆ.
ಉತ್ತರಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಕೇದಾರನಾಥಕ್ಕೆ ಡೆಹರಾಡೋನ್ ವಿಮಾನ ನಿಲ್ದಾಣದ ಮೂಲಕ ರಸ್ತೆ ಮಾರ್ಗದಲ್ಲಿ ಗೌರಿಕುಂಡದವರೆಗೆ ಹೋಗಿ ಅಲ್ಲಿಂದ ಚಾರಣ, ಕುದುರೆ ಅಥವಾ ಹೆಲಿಕಾಪ್ಟರ್ ಮೂಲಕ ಹೋಗಬಹುದು.