

ಪ್ರಶಾಂತ ರಿಪ್ಪನ್ಪೇಟೆ, ಬೆಂಗಳೂರು : ‘‘ಸೌರಾಷ್ಟ್ರೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನಮ್, ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್, ಪರ್ಲ್ಯಾಂ ವೈದ್ಯನಾಥಂಚ ಢಾಕಿನ್ಯಾಂ ಭೀಮ ಶಂಕರಮ್,
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ, ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ, ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ.
ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ, ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ.’
ಸಪ್ತ ಜನ್ಮಗಳ ಪಾಪಗಳನ್ನು ನಾಶ ಮಾಡುವ ಶಕ್ತಿ ಇರುವ ದ್ವಾದಶ ಜ್ಯೋತಿರ್ಲಿಂಗಗಳು ಭಾರತದ ಧಾರ್ಮಿಕ ಸಂಸ್ಕೃತಿಯ ಹೆಗ್ಗುರುತುಗಳು. ಜಾತಿ, ಮತ, ಭಾಷೆ, ಪ್ರದೇಶ ಎಂಬ ಎಲ್ಲ ಭೇದಗಳನ್ನು ಬದಿಗೊತ್ತಿ ಸರ್ವರಲ್ಲಿ ಸಾಮರಸ್ಯ ಮತ್ತು ಸಮನ್ವಯವನ್ನು ಸಾಧಿಸುವಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಮಹಾ ಶಿವರಾತ್ರಿಯ ಪರ್ವಕಾಲದಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಹತ್ತನೆಯದಾದ ಶ್ರೀ ತ್ರ್ಯಂಬಕೇಶ್ವರ ಕ್ಷೇತ್ರದ ಕುರಿತು ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.
ಮಹಾರಾಷ್ಟ್ರದ ನಾಸಿಕ್ ಸಮೀಪದಲ್ಲಿದೆ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ. ಪವಿತ್ರ ಗೋದಾವರಿ ನದಿಯ ಉಗಮಸ್ಥಾನ ಇದಾಗಿದ್ದು, ಈ ಕ್ಷೇತ್ರವನ್ನು ಗೌತಮೀ ತಟ ಎಂತಲೂ ಕರೆಯುತ್ತಾರೆ. ಬೇರೆಲ್ಲಾ ಜ್ಯೋತಿರ್ಲಿಂಗಗಳು ಶಿವನ ಸಂಕೇತವಾಗಿ ಒಂದೇ ಸ್ವರೂದಲ್ಲಿದ್ದರೆ; ತ್ರ್ಯಂಬಕೇಶ್ವರ ಲಿಂಗವು ಮೂರು ಮುಖಗಳಿಂದ ಕೂಡಿದ್ದು, ಬ್ರಹ್ಮ, ವಿಷ್ಣು, ಮಹೇಶ್ವರ ತ್ರಿಮೂರ್ತಿಗಳ ಪ್ರತೀಕವಾಗಿದೆ.
ತ್ರ್ಯಂಬಕೇಶ್ವರ ದೇವಾಲಯವು ಬ್ರಹ್ಮಗಿರಿ ಬೆಟ್ಟಗಳ ತಪ್ಪಲಿನಲ್ಲಿದ್ದು, ಹಿಂದೆ ಗೌತಮ ಮುನಿಗಳ ಆಶ್ರಮ ಇದೇ ಸ್ಥಳದಲ್ಲಿದ್ದ ಪ್ರತೀತಿ ಇದೆ. ಗೋಹತ್ಯೆ ದೋಷ ನಿವಾರಣೆಗಾಗಿ ಶಿವನ ಜಟೆಯಲ್ಲಿ ಬಂಧಿಯಾಗಿದ್ದ ಗಂಗೆಯನ್ನು ಭೂಮಿಗೆ ಕರೆತರಲು ಗೌತಮಮುನಿ ಉಗ್ರ ತಪಸ್ಸು ಮಾಡುತ್ತಾನೆ. ಶಿವನನ್ನು ಬಿಟ್ಟು ಹೋಗಲೊಪ್ಪದ ಗಂಗೆಯನ್ನು ಭೂಮಿಗೆ ಕಳಿಸಲು ಜಟೆಯನ್ನು ಬಿಚ್ಚಿ ನರ್ತನ ಮಾಡಿದ ಶಿವನು ಗಂಗೆಯು ಗೋದಾವರಿ ಹೆಸರಿನಲ್ಲಿ ಉಗಮಿಸಿದ ತಟದಲ್ಲಿಯೇ ನೆಲೆಸುತ್ತಾನೆ. ನಾಸಿಕ್ನ ಗೋದಾವರಿ ತೀರದಲ್ಲಿ ಕೂಡ ಕುಂಭಮೇಳ ನಡೆಯುತ್ತದೆ.
ಮುಂಬೈನಿಂದ 220ಕಿ.ಮೀ.ದೂರದಲ್ಲಿರುವ ತ್ರ್ಯಂಬಕೇಶ್ವರಕ್ಕೆ ನಾಸಿಕ್ ಏರ್ಪೋರ್ಟ್ ಮೂಲಕ ಅಥವಾ ರೈಲು, ರಸ್ತೆ ಮಾರ್ಗವಾಗಿ ಹೋಗಬಹುದು.