

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ತಾಲೂಕಿನ ಪ್ರಮುಖ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಅಧಿಕಾರಿ, ಸಿಬ್ಬಂದಿಗಳ ಕೊರತೆ ಕುರಿತು ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ, ಆಡಳಿತ ಸೌಧದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಮೂಡುಬಿದಿರೆ ತಾಲೂಕಿನಲ್ಲಿ ಪೂರ್ಣಾವಧಿಯ ಕೃಷಿ ಅಧಿಕಾರಿಗಳಿಲ್ಲ. 12 ವರ್ಷಗಳಿಂದ ಪೂರ್ಣಾವಧಿಯ ಪಶು ವೈದ್ಯಾಧಿಕಾರಿ, ಸಿಬ್ಬಂದಿಗಳಿಲ್ಲ. ಪೊಲೀಸ್ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದೆ ಎಂದು ಆಯಾ ಇಲಾಖೆಯ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ನೆಲ್ಲಿಕಾರು ಗ್ರಾಮದಲ್ಲಿ ಹಲವು ವರ್ಷಗಳಿಂದ ಪೂರ್ಣಾವಧಿಯ ಪಿಡಿಒ, ಕಾರ್ಯದರ್ಶಿಗಳಿಲ್ಲ. ದೊಡ್ಡ ಗ್ರಾ.ಪಂ.ಆಗಿರುವ ಕಾರಣ ಜನರಿಗೆ ತೊಂದರೆ ಆಗುತ್ತಿದೆ ಎಂದು ಕೆಡಿಪಿ ಸದಸ್ಯ ಶಶಿಧರ್ ತಿಳಿಸಿದರು.
ಶೀಘ್ರ ಮಾರುಕಟ್ಟೆ ನಿರ್ಮಾಣ: ಪುರಸಭೆ ಮಾರುಕಟ್ಟೆ ನಿರ್ಮಾಣಕ್ಕೆ ಪ್ರಾಚ್ಯ ವಸ್ತು ಇಲಾಖೆ ಸೂಚನೆಯಂತೆ ಕಟ್ಟಡದ ಎತ್ತರ ಹಾಗೂ ಲೋಡ್, ಅನ್‌ಲೋಡ್ ಮಾಡುವ ಸ್ಥಳದ ಕುರಿತು ಸೂಕ್ತ ಮಾರ್ಪಾಡು ಮಾಡಿ, ಇಲಾಖೆಗೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಕಾರತ್ಮಕ ಬೆಳವಣಿಗೆ ಆಗುವ ಭರವಸೆ ಇದೆ ಎಂದು ಪುರಸಭೆ ಮುಖ್ಯಾಧಿಕಾರಿ ಇಂದು ಎಂ.ತಿಳಿಸಿದರು.
ಕೆಎಸ್‌ಆರ್‌ಟಿಸಿ ಸಂಬಂಧಿಸಿದಂತೆ ರಿಂಗ್‌ರೋಡ್ ಬಳಿ ಸ್ಥಳ ಗುರುತಿಸಲಾಗಿದ್ದು, ಮುಂದಿನ ಕ್ರಮ ಕೈಗೊಂಡು ಸಾರಿಗೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಉಪಕೇಂದ್ರ ನಿರ್ಮಾಣ: ಮೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ ಲೋ ವೋಲ್ಟೋಜ್ ಕುರಿತು ಕೆಡಿಪಿ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಣಾ ಇಂಜಿನಿಯರ್ ಮೋಹನ್ ಮಾತನಾಡಿ, ಕೆಲವು ಭಾಗದಲ್ಲಿ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಕಾಮಗಾರಿ ನಡೆಯುವಾಗ, ಇನ್ನೊಂದು ಭಾಗದ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಬೇಕಾಗಿರುವುದರಿಂದ ಕೆಲವೊಂದು ಪ್ರದೇಶಗಳಲ್ಲಿ ಸರಬರಾಜಿನಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದೆ. ಶಿರ್ತಾಡಿಯಲ್ಲಿ 14 ಕೋಟಿ ರೂ.ವೆಚ್ಚದಲ್ಲಿ ಉಪಕೇಂದ್ರ ನಿರ್ಮಾಣವಾಗುತ್ತಿದು, ಪ್ರಗತಿಯಲ್ಲಿದೆ ಎಂದರು.
ಕಾನೂನು ಸುವ್ಯವಸ್ಥೆ ಕ್ರಮ: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದೇವೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಸ್ ಕೂಡ ಹಾಕುತ್ತಿದ್ದೇವೆ. ಮಟ್ಕಾದಂಧೆ ನಡೆಸುತ್ತಿರುವ ಮಾಹಿತಿ ಸಿಕ್ಕಿದ ಕೂಡಲೇ ಕ್ರಮ ಕೈಗೊಳ್ಳುತ್ತಿದ್ದೇವೆ. ಆದರೆ ಗೋವಾದಿಂದ ಸಿಮ್ ಖರೀದಿಸಿ, ಅದರ ಮೂಲಕ ಆನ್‌ಲೈನ್ ಜೂಜಾಟ ನಡೆಯುತ್ತಿರುವುದರಿಂದ ಅಂಥ ಪ್ರಕರಣ ಪತ್ತೆ ಹಚ್ಚುವುದು ಕಷ್ಟ ಸಾಧ್ಯ ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ತಿಳಿಸಿದರು.
ಗೂಡಂಗಡಿಗಳಲ್ಲಿ ಮದ್ಯ ಮಾರಾಟದ ಪ್ರಕರಣ ಹೆಚ್ಚಾಗುತ್ತಿದ್ದು, ಅವುಗಳನ್ನು ಅದಷ್ಟು ಬೇಗ ನಿಲ್ಲಿಸಿ. ಈ ಮೂಲಕ ಮನೆ, ಸಮಾಜ ಹಾಳಾಗುದನ್ನು ತಪ್ಪಿಸುವಂತೆ ಶಾಸಕರು ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆ ಅಧ್ಯಕ್ಷ ಜಯಶ್ರೀ ಕೇಶವ್, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಕುಸಮಾಧರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ತಾಲೂಕು ಆಡಳಿತಾಧಿಕಾರಿ ಡಾ.ಅರುಣ್ ಕುಮಾರ್, ಕೆಡಿಪಿ ಸದಸ್ಯರಾದ ಪ್ರವೀಣ್ ಪೂಜಾರಿ, ಅಭಿನಂದನ್ ಬಲ್ಲಾಳ್ ಪಡುಮಾರ್ನಾಡು, ಟಿ.ಎನ್.ಕೆಂಬಾರೆ ಕಡಂದಲೆ, ಜೋಕಿಮ್ ಕೊರೆಯಾ ಕಲ್ಲಮುಂಡ್ಕೂರು, ಶಶಿಧರ ಎಂ.ಮಾಂಟ್ರಾಡಿ ಹಾಗೂ ಶುಭಾ ಎಸ್.ಪೂಜಾರಿ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.