ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕೆರೆ ಊರಿನ ಜಲ ಪಾತ್ರೆ. ಮಳೆಗಾಲ ಬಂತೆಂದರೆ ಹಿಂದೆ ಕೆರೆ ಕೋಡಿ ಹರಿಯವುದೇ ಆ ಊರಿನ ಮಳೆ ಪ್ರಮಾಣದ ಲೆಕ್ಕಾಚಾರವಾಗಿತ್ತು. ಇದೇ ಮುಂದಿನ ವರ್ಷದ ಊರಿನ ಸಮೃದ್ಧಿಯ ಸಂಕೇತವಾಗಿರುತ್ತಿತ್ತು. ಕಾಲಕ್ರಮೇಣ ಊರಿಗೆ ನೀರುಣಿಸುತ್ತಿದ್ದ ಕೆರೆ ಕಣ್ಮರೆಯಾಗತೊಡಗಿದವು. ಒಂದು ಕಾಲದಲ್ಲಿ ನೀರು ತುಂಬಿ ಊರನ್ನು ತಂಪಾಗಿಡುತ್ತಿದ್ದ ಕೆರೆ ಇಂದು ಆಟದ ಮೈದಾನಗಳಾಗಿ ಪರಿವರ್ತನೆಯಾಗಿವೆ. ಇಂತಹ ಸಂದರ್ಭದಲ್ಲಿ 2016ರಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಡಾ.ಹೇಮಾವತಿ ವೀ.ಹೆಗ್ಗಡೆಯವರು ನಮ್ಮೂರು ನಮ್ಮ ಕೆರೆ ಎನ್ನುವ ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ರಮ ಜಾರಿಗೆ ತಂದರು.
ಒಂದೇ ವರ್ಷದಲ್ಲಿ 160 ಕೆರೆಗಳಿಗೆ ಪುನಶ್ಚೇತನ ಭಾಗ್ಯ: 2024-25ನೇ ಸಾಲಿನಲ್ಲಿ ರಾಜ್ಯಾದ್ಯಂತ 160 ಕೆರೆಗಳ ಪುನಶ್ಚೇತನ ಕಾರ್ಯ ನಡೆಸಲಾಗಿದೆ. ಪ್ರಸ್ತುತ ವರ್ಷ ಉತ್ತಮವಾಗಿ ಮಳೆಯಾಗಿರುವುದರಿಂದ ಕೆರೆಗಳ ಪುನಶ್ಚೇತನ ಕಾರ್ಯ ತುಸು ವಿಳಂಬವಾಗಿ ಪ್ರಾರಂಭಿಸಲಾಯಿತು. ಕೆರೆಗಳ ಪುನಶ್ಚೇತನಕ್ಕಾಗಿ 1760 ರೈತರು, ಮಹಿಳೆಯರನ್ನೊಳಗೊಂಡ 160 ಕೆರೆ ಸಮಿತಿ ರಚಿಸಲಾಯಿತು. ಜನ ಸಹಭಾಗಿತ್ವದೊಂದಿಗೆ ಕೈಗೊಂಡ ಬೃಹತ್ ಕಾರ್ಯದಲ್ಲಿ ಸಂಸ್ಥೆಯ 160 ನೋಡಲ್ ಅಧಿಕಾರಿ, 7 ನುರಿತ ಇಂಜಿನಿಯರ್‌ಗಳ ತಂಡ ಶ್ರಮಿಸಿದ್ದರಲ್ಲದೇ ಕೆರೆ ಸಮಿತಿ ಪದಾಧಿಕಾರಿಗಳು ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. 242 ಜೆಸಿಬಿ, ಇಟಾಚಿ ಯಂತ್ರ, 4304ಕ್ಕೂ ಅಧಿಕ ಟ್ರಾೃಕ್ಟರ್, ಟಿಪ್ಪರ್‌ಗಳನ್ನು ಬಳಸಿಕೊಳ್ಳಲಾಗಿದೆ. ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರು 12.50 ಲಕ್ಷ ಲೋಡ್ ಕೆರೆಯ ಹೂಳನ್ನು ತಮ್ಮ ಕೃಷಿ ತೋಟಕ್ಕೆ ಸಾಗಾಟ ಮಾಡಿದರು. ಹೂಳು ತೆಗೆಯುವುದು, ಏರಿ ಭದ್ರಪಡಿಸುವುದು, ಕಾಲುವೆ, ಕೋಡಿಗಳ ರಿಪೇರಿ, ಕಲ್ಲು ಕಟ್ಟುವುದು ಮೊದಲಾದ ಕಾಮಗಾರಿ ಮೂಲಕ ಕೆರೆಗಳು ವೈಜ್ಞಾನಿಕ ಮರು ನಿರ್ಮಾಣಗೊಂಡಿವೆ.
ಪುನಶ್ಚೇತನಗೊಂಡ ಕೆರೆಗಳ ಹಸ್ತಾಂತರ: ಸುಂದರವಾಗಿ ಪುನರ್ ನಿರ್ಮಾಣಗೊಂಡ ಕೆರೆಗಳನ್ನು ಮತ್ತೆ ಮುಂದಿನ ನಿರ್ವಹಣೆಗಾಗಿ ಸ್ಥಳೀಯ ಗ್ರಾಪಂ, ಸಮಿತಿಗೆ ಹಸ್ತಾಂತರಿಸಲಾಗುತ್ತಿದೆ. ಈ ಕೆರೆಗಳನ್ನು ಮುಂದೆ ಸಂರಕ್ಷಿಸುವ, ಅಭಿವೃದ್ಧಿಪಡಿಸುವ, ಅತಿಕ್ರಮಣವಾಗದಂತೆ ತಡೆಗಟ್ಟುವ, ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಅವರಿಗೆ ವಹಿಸಲಾಗುತ್ತದೆ. ಇದಕ್ಕಾಗಿ ಕಾಲಕಾಲಕ್ಕೆ ಕೆರೆ ಸಮಿತಿ ಪದಾಧಿಕಾರಿಗಳ ಕಾರ್ಯಾಗಾರ ನಡೆಸಿ ಪ್ರೇರಣೆ ನೀಡಲಾಗುತ್ತಿದೆ.
ಕೆರೆಯಂಗಳದಲ್ಲಿ ಗಿಡನಾಟಿ: ಮುಂದಿನ ಮಳೆಗಾಲ ಆರಂಭವಾಗುತ್ತಿದ್ದಂತೆ ಪುನಶ್ಚೇತನಗೊಂಡ ಕೆರೆಗಳ ಸುತ್ತಲೂ ಗಿಡನಾಟಿ ಕಾರ್ಯ ನಡೆಯಲಿದೆ. ಗ್ರಾಪಂ, ಸಮಿತಿ ಸಹಭಾಗಿತ್ವದೊಂದಿಗೆ ಹೂವು, ಹಣ್ಣು, ನೆರಳು ಕೊಡುವ ವಿವಿಧ ಜಾತಿಯ ಗಿಡ ನೆಡಲಾಗುತ್ತದೆ. ಅದರಂತೆ ಸಮೃದ್ಧ ಕೆರೆಯ ಸುತ್ತ ಹಸಿರು ಬೆಳೆದು ಪ್ರಾಣಿ ಪಕ್ಷಿಗಳಿಗೆ ಹಣ್ಣು, ನೆರಳು, ನೀರು ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದೆ.
ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಮಾತನಾಡಿ, 2024-25ನೇ ಸಾಲಿನಲ್ಲಿ 160 ಕೆರೆಗಳು ಸುಂದರವಾಗಿ ಪುನರ್ ನಿರ್ಮಾಣಗೊಂಡು ತನ್ನೊಡಲಲ್ಲಿ ನೀರು ತುಂಬಿಸಿಕೊಳ್ಳಲು ಅಣಿಯಾಗಿ ನಿಂತಿವೆ. ಸಂಸ್ಥೆ ವತಿಯಿಂದ ಇದುವರೆಗೆ ಪುನಶ್ಚೇತನಗೊಂಡ 889 ಕೆರೆಗಳು ತುಂಬಿ ಸಮೃದ್ಧಗೊಂಡು ಜನ, ಜಾನುವಾರುಗಳಿಗೆ ನೀರ ಬವಣೆ ನೀಗಿಸಿವೆ. ಮುಂದಿನ ಒಂದೆರಡು ತಿಂಗಳಲ್ಲಿ ಪುನಶ್ಚೇತನಗೊಳ್ಳಲಿರುವ ಕೆರೆಗಳ ಸಂಖ್ಯೆ 1000 ಗಡಿ ದಾಟಲಿದೆ ಎಂದು ತಿಳಿಸಿದ್ದಾರೆ.
ವನ್ಯ ಜೀವಿಗಳಿಗಾಗಿ ಕೆರೆಗಳ ನಿರ್ಮಾಣ
ಕೆರೆಗಳು ಮಾನವರಂತೆ ಜಾನುವಾರುಗಳಿಗೂ ಕುಡಿಯುವ ನೀರು ಬಹುಮುಖ್ಯ ಮೂಲವಾಗಿದೆ. ಇದಕ್ಕಾಗಿಯೇ ಡಾ.ಡಿ.ವೀರೇಂದ್ರ ಹೆಗ್ಗಡೆ, ಡಾ.ಹೇಮಾವತಿ ವೀ.ಹೆಗ್ಗಡೆಯವರ ಆಶಯದಂತೆ ಶಿವಮೊಗ್ಗದ ತಾವರಕೆರೆ ಹುಲಿ ಮತ್ತು ಸಿಂಹಧಾಮದಲ್ಲಿ 10 ಕೆರೆಗಳನ್ನು ಈ ವರ್ಷ ಪುನಶ್ಚೇತನಗೊಳಿಸಲಾಗಿದೆ. 400 ವನ್ಯಜೀವಿಗಳಿಗೆ ಈ ಕೆರೆಗಳ ಮೂಲಕ ಜೀವಜಲ ಒದಗಿಸಲಾಗಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲೂ ಒಂದು ಕೆರೆ ಪುನಶ್ಚೇತನಗೊಳಿಸಲಾಗಿದೆ.
ಕೆರೆ ಕಾಯಕಕ್ಕೆ ಅದ್ಭುತ ಜನ ಬೆಂಬಲ ರಾಜ್ಯಾದ್ಯಂತ ನಡೆದ ಈ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಸಚಿವರು, ಶಾಸಕರು, ಮತ್ತಿತರ ಜನಪ್ರತಿನಿಧಿಗಳು ಭೇಟಿ ನೀಡಿ ಬೆಂಬಲ ಪ್ರೋತ್ಸಾಹ ನೀಡಿರುತ್ತಾರೆ. ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳು ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡಿರುತ್ತಾರೆ. ಸ್ವಾಮೀಜಿಗಳು, ರೈತ ಮುಖಂಡರು ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿರುತ್ತಾರೆ. ಸ್ಥಳೀಯ ಗ್ರಾಪಂನ ಸಹಕಾರ ನಿರಂತರವಾಗಿತ್ತು. ತಿಂಗಳುಗಳ ಕಾಲ ತಮ್ಮ ಊರಲ್ಲಿ ನಡೆದ ಈ ಕೆರೆ ಪುನಶ್ಚೇತನ ಕಾರ್ಯ ಕಂಡು ಜನ ಸಂಭ್ರಮಿಸಿದರು.
ಜನ ಸಹಭಾಗಿತ್ವದೊಂದಿಗೆ ಕೆರೆಗಳ ಪುನಶ್ಚೇತನ ಮಾಡಲಾಗುತ್ತಿದೆ. ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಇಂತಹ ಕಾರ್ಯಗಳಿಗೆ ಜನ ಕೈ ಜೋಡಿಸುತ್ತಿದ್ದಾರೆ. ಕ್ರಿಕೆಟ್ ಮೈದಾನದಂತಹ ಕೆರೆಗಳು ಪುನಶ್ಚೇತನಗೊಂಡು ಜಲ ಸಮೃದ್ಧಿಗೊಂಡಿವೆ. ಮತ್ತೆ ಹೂಳು ತುಂಬಿ ಕೆರೆ ಹಾಳಾಗದಂತೆ ರಕ್ಷಿಸಿಕೊಳ್ಳಬೇಕಿದೆ. ಡಾ.ಡಿ.ವೀರೇಂದ್ರ ಹೆಗ್ಗಡೆ
ಇದುವರೆಗಿನ ಸಾಧನೆ ಒಟ್ಟು 889 ಕೆರೆಗಳು ಪುನಶ್ಚೇತನಗೊಂಡಿದ್ದು, 240.13 ಲಕ್ಷ ಕಿ.ಮೀ. ಹೂಳು ತೆಗೆಯಲಾಗಿದೆ. 530 ಕೋಟಿ ಗ್ಯಾಲನ್ ಹೆಚ್ಚಳಗೊಂಡಿರುವ ನೀರಿನ ಸಂಗ್ರಹಣ ಸಾಮರ್ಥ್ಯ ಪ್ರಯೋಜನವಾಗಲಿರುವ ಕೃಷಿ ಭೂಮಿ 2,58,095 ಎಕ್ರೆ, 4,05,830 ಪ್ರಯೋಜನ ಪಡೆದುಕೊಂಡ ಕುಟುಂಬ, 366 ಎಕ್ರೆ ಒತ್ತುವರಿ ತೆರವುಗೊಳಿಸಲಾದ ಪ್ರದೇಶ, 69.05 ಕೋಟಿ ರೂ. ಬಳಸಿದ ಯೋಜನೆ ಅನುದಾನ.