ಕಾಯಕದಲ್ಲಿ ನೀತಿ, ದಾಸೋಹದಲ್ಲಿ ಪ್ರೀತಿ ಇರಲಿ

21HLY-1(A)
Published on

ಹಳಿಯಾಳ: ಶ್ರೀಕ್ಷೇತ್ರ ಉಳವಿ ಶ್ರೀ ಚನ್ನಬಸವಣ್ಣ ಜಾತ್ರಾ ಮಹೋತ್ಸವಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ಅನ್ನದಾಸೋಹದ ಸೇವೆಯನ್ನು ಪಟ್ಟಣದ ಬಸವಕೇಂದ್ರದ ವತಿಯಿಂದ ಶನಿವಾರ ಆರಂಭಿಸಲಾಯಿತು.

ಹಾರೋಗೆರೆಯ ನಿವೃತ ಶಿಕ್ಷಕ, ಶರಣ ವಿಚಾರ ವಾಹಿನಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಐ.ಆರ್. ಮಠಪತಿ ದಾಸೋಹ ಸೇವೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಯಕದಲ್ಲಿ ನೀತಿ ಇರಲಿ, ದಾಸೋಹದಲ್ಲಿ ಪ್ರೀತಿ ಇರಲಿ. ಇದನ್ನು ಮಾಡಿ ತೋರಿದವರು ಬಸವಾದಿ ಶರಣರು. ನಿಷ್ಠೆ, ಪ್ರಾಮಾಣಿಕತೆಯನ್ನು ಸಮಾಜದಲ್ಲಿ ಬೆಳೆಸಿದರು. ಕೊಟ್ಟು ಬರೆದಿಡುವುದು ಸಾಲ ಎಂದೆನಿಸುವುದು, ಕೊಟ್ಟು ನೆನಪಿಡುವುದು ದಾನ ಎನಿಸುವುದು, ಕೊಟ್ಟು ಮರೆಯುವುದು ದಾಸೋಹ ಎಂದೆನಿಸುವುದು ಎಂದು ಮಾರ್ವಿುಕವಾಗಿ ವ್ಯಾಖ್ಯಾನಿಸಿದ ಅವರು ಕಾಯಕ, ದಾಸೋಹದ ಅಡಿಗಲ್ಲ ಮೇಲೆ ಅರಿವು-ಆಚಾರದ ಸಮಾಜವೆಂಬ ಸೌಧ ಕಟ್ಟಿದವರು ಬಸವಾದಿ ಶರಣರು. ಅವರ ಮಾರ್ಗದಲ್ಲಿ ಮುನ್ನಡೆವುದೆ ಈ ದಾಸೋಹ ಸೇವೆ ಎಂದರು.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಈಶ್ವರ ಸಾಣಿಕೊಪ್ಪ ಮಾತನಾಡಿ, ನಮಗೊಸ್ಕರ ಮಾಡುವುದು ಕೆಲಸ, ಸಮಾಜಕ್ಕೊಸ್ಕರ ನಿಸ್ವಾರ್ಥದಿಂದ ಮಾಡುವುದು ಕಾಯಕ, ದಾಸೋಹ ಎಂದೆನಿಸಿಕೊಳ್ಳುತ್ತದೆ ಎಂದರು.

ಉದ್ಯಮಿ ಸದಾನಂದ ಶಿವಳ್ಳಿ ಮಾತನಾಡಿದರು. ಹಳಿಯಾಳ ಬಸವಕೇಂದ್ರದ ಅಧ್ಯಕ್ಷ ಚಂದ್ರಕಾಂತ ಅಂಗಡಿ, ಧಾರವಾಡದ ಬಸವಕೇಂದ್ರದ ಸಿದ್ದರಾಮಣ್ಣ ನಡಕಟ್ಟಿ, ಸವಿತಾ ನಡಕಟ್ಟಿ, ದಾಸೋಹ ಸೇವಾರ್ಥಿಗಳಾದ ಶಿವಾನಂದ ದೇವಗಿರಿ, ಸಂಜಯ ಲಕಮನಹಳ್ಳಿ, ಶಿವಾನಂದ ಬಾವಿಕಟ್ಟಿ, ಹಳಿಯಾಳ ಬಸವಕೇಂದ್ರದ ಸಿದ್ದಲಿಂಗ ನೇಗಿನಹಾಳ, ಮಹಾದೇವಿ ನೇಗಿನಹಾಳ, ಪರಿಕ್ಷೀತ ಅಂಗಡಿ, ಬಸಣ್ಣ ಗಾಣಿಗೇರ, ಸಿದ್ದಪ್ಪ ಬಿರಾದಾರ, ಪ್ರಕಾಶ ಅಂಗಡಿ, ಅಂಜುಮನ್ ಸಂಸ್ಥೆಯ ಸದಸ್ಯ ಜಾವೇದ ಬೀಡಿವಾಲೆ, ಜಯಕರ್ನಾಟಕ ಸಂಘಟನೆಯ ತಾಲೂಕಾಧ್ಯಕ್ಷ ಶಿರಾಜ ಮುನವಳ್ಳಿ, ಪುರಸಭೆ ಸದಸ್ಯ ಉದಯ ಹೂಲಿ, ನವೀನ ಕಾಟ್ಕರ್ ಮತ್ತು ಉಮೇಶ ಮದ್ನಳ್ಳಿಮಠ, ಸುಹಾಸ ಕೂಡಲಮಠ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದಾಸೋಹಿ ಗಳಾದ ಶಿವಾನಂದ ದೇವಗಿರಿ, ಸಂಜಯ ಲಕಮನಹಳ್ಳಿ, ಐ.ಆರ್. ಮಠಪತಿ, ಹರಳಯ್ಯ ಮಾಸ ಪತ್ರಿಕ ಸಂಪಾದಕ ಮಾರ್ಕಾಂಡೇಯ ದೊಡ್ಡಮನಿ ಅವರನ್ನು ಹಳಿಯಾಳ ಮತ್ತು ಧಾರವಾಡ ಬಸವ ಕೇಂದ್ರದಿಂದ ಸನ್ಮಾನಿಸಲಾಯಿತು. ಪತ್ರಕರ್ತೆ ಸುಮಂಗಲಾ ಅಂಗಡಿ ವಚನ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ವೀರಣ್ಣ ವಡ್ಡಿನ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net