

ಮಾನ್ವಿ: ಬಸವಣ್ಣ ಎತ್ತಲ್ಲ, ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರನ್ನು ಮೇಲಕ್ಕೆತ್ತಿ ಮುಖ್ಯವಾಹಿನಿಗೆ ತಂದು ಉತ್ತಮ ಸ್ಥಾನ ನೀಡಿದವರು ಎಂದು ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಸಮ ಸಮಾಜ ಕಟ್ಟಲು ಶ್ರಮಿಸಿದ ನಾಯಕ
ಪಟ್ಟಣದ ಈಶ್ವರ ದೇವಸ್ಥಾನದ ಅವರಣದಲ್ಲಿ ಶನಿವಾರ ಬಸವಕೇಂದ್ರ ಹಾಗೂ ಬಸವಕೇಂದ್ರದ ಮಹಿಳಾ ಹಾಗೂ ಯುವಕ ಘಟಕ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನಾಯಕ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣ ಹಸಿದು ಬಂದ ಸಾವಿರಾರು ಜನರಿಗೆ ಮಹಾಮನೆಯ ಮೂಲಕ ಅನ್ನ, ಶಿಕ್ಷಣ ಮತ್ತು ಕಾಯಕ ದಾಸೋಹ ನೀಡಿದರು.
ಕಾಯಕದ ಮಹತ್ವ ಅರೆತವರೆಲ್ಲರೂ ಶರಣರಾದರು. ಸಮ ಸಮಾಜ ನಿರ್ಮಾಣಕ್ಕೆ 12ನೇ ಶತಮಾನದಲ್ಲಿ ಬಸವಣ್ಣ ಎಲ್ಲವನ್ನು ಸಮಾನಗಿ ಕಂಡು ಸರ್ವರಿಗೂ ಸಮಾನತೆಯ ತತ್ವ ಬೋಧಿಸಿದರು. ಇದನ್ನು ಕಂಡು ದೇಶದ ಮೂಲೆ ಮೂಲೆಗಳಿಂದ ಬಂದ ಅನೇಕರು ಶರಣರಾಗಿ ವಚನಕಾರರಾದರು ಎಂದರು.
ಹೊಸಪೇಟೆಯ ಶರಣ ಸಾಹಿತಿ ಬಸವಕಿರಣ ಮಾತನಾಡಿ, ಬಸವಣ್ಣ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಕಲ್ಪಿಸಿದ್ದರಿಂದ ಅನೇಕ ಶರಣೆಯರು ತಮ್ಮ ಅನುಭವ ಮೂಲಕ ಅನೇಕ ವಚನಗಳು ಬರೆದರು. ನಿಜವಾದ ಕಾಯಕಕ್ಕೆ ಅರ್ಥ ದೊರೆತ್ತಿದ್ದು ಶರಣೆಯರಿಂದ ಎಂದರು.
ಬಸವ ವೃತ್ತದಿಂದ ಈಶ್ವರ ದೇವಸ್ಥಾನದವರೆಗೆ ಬಸವಣ್ಣ ಭಾವಚಿತ್ರ ಮತ್ತು ನೀರಮಾನ್ವಿ ಬಸವ ಸೈನ್ಯ ಮಕ್ಕಳಿಂದ ವಚನ ಕಟ್ಟುಗಳ ಮೆರವಣಿಗೆ ಮಾಡಲಾಯಿತು. ರಾಯಚೂರು ಕಲಾ ತಂಡದಿಂದ ಶಿವಶರಣ ಕಂಬಳಿ ನಾಗೀದೇವ ನಾಟಕ ಪ್ರದರ್ಶನಗೊಂಡಿತು.
ಬಸವ ಕೇಂದ್ರದ ಗೌರವಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್, ಅಧ್ಯಕ್ಷ ಜಿ.ಎಂ. ರಂಗಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮೀ ಪಾಟೀಲ್, ಯುವ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಮೇದಾ, ಪ್ರಮುಖರಾದ ದೇವೇಂದ್ರ ದುರ್ಗದ್, ಅಮರೇಶಪ್ಪ ಗವಿಗಟ್ಟು, ಶೇಖರಪ್ಪ ವಕೀಲ, ವೀರನಗೌಡ ಪೋತ್ನಾಳ, ಗುಮ್ಮ ಬಸವರಾಜ, ಶರಣಪ್ಪ ಕುಂಬಾರ, ಅಮರೇಶ ಹಡಪದ, ಲಕ್ಷ್ಮಣ ಜಾನೇಕಲ್, ಮಹ್ಮದ್ ಮುಜೀಬ್, ಅಮರೇಶಪ್ಪ ಆಲ್ದಾಳ, ಸೂಗಪ್ಪಗೌಡ ಹರವಿ, ಬೆಟ್ಟದೂರು ಇತರರಿದ್ದರು.