ಸಮ ಸಮಾಜ ಕಟ್ಟಲು ಶ್ರಮಿಸಿದ ನಾಯಕ

30 nrp 1 basava
ಎನ್.ಆರ್.ಪುರದ ಮೆಣಸೂರು ಬಸವಕೇಂದ್ರದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಎನ್.ಜೆ.ಶಿವಕುಮಾರ್ ಉಪನ್ಯಾಸ ನೀಡಿದರು. ತನುಜಾ ಟಿ. ಸವದತ್ತಿ, ಜುಬೇದಾ, ಪ್ರಶಾಂತ್ ಎಲ್. ಶೆಟ್ಟಿ, ಶಾಂತರಾಜ್, ಗುರುದತ್ ಕಾಮತ್, ವೈ.ಎಸ್.ರವಿ, ಪುಟ್ಟಸ್ವಾಮಿ, ಸೋಮೇಶ್ ಇದ್ದರು.
Published on

ಎನ್.ಆರ್.ಪುರ: ಜಾತಿ ಎಂಬ ಕತ್ತಲೆಯನ್ನು ಹೋಗಲಾಡಿಸಿ ಜ್ಯೋತಿಯನ್ನು ಬೆಳಗಿಸಿದವರು ಬಸವಣ್ಣನವರು ಎಂದು ದಾವಣಗೆರೆ ಸಾಹಿತಿ ಡಾ. ಎನ್.ಜೆ.ಶಿವಕುಮಾರ್ ಹೇಳಿದರು.

ಬುಧವಾರ ಮೆಣಸೂರು ಬಸವ ಕೇಂದ್ರದಲ್ಲಿ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ಮಾತನಾಡಿ, ಬಸವ ಜಯಂತಿಯಂದು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಎತ್ತುಗಳು ರೈತರ ಬೆನ್ನೆಲುಬು. 12ನೇ ಶತಮಾನವೆಂಬುದು ಪರಿವರ್ತನೆಯ ಕಾಲ. ಸಮ ಸಮಾಜ ಕಟ್ಟುವಲ್ಲಿ ಬಸವಣ್ಣನವರ ಪಾತ್ರ ಮಹತ್ತರ. ಕರ್ನಾಟಕದಲ್ಲಿ ಕಲ್ಯಾಣ ರಾಜ್ಯವನ್ನು ಸ್ಥಾಪಿಸಿದವರು. ಸಮಾಜದ ಅನೇಕ ಸಮಸ್ಯೆಗಳಿಗೆ ವಚನಗಳ ಮೂಲಕ ಪರಿಹಾರ ನೀಡಿದ್ದಾರೆ. 1913ರಲ್ಲಿ ದಾವಣಗೆರೆಯ ದೊಡ್ಡಪೇಟೆಯ ಶ್ರೀ ವಿರಕ್ತಮಠದಲ್ಲಿ ಮೊದಲ ಬಾರಿಗೆ ಬಸವಣ್ಣನವರ ಜಯಂತಿ ಆಚರಿಸಿದ ಐತಿಹಾಸಿಕ ಸ್ಥಳವಾಗಿದೆ. ಜಾತಿ ಎಂಬ ಅನಿಷ್ಟ ಪದ್ಧತಿಯನ್ನು ನಾವಾಗಿಯೇ ಸೃಷ್ಟಿ ಮಾಡಿಕೊಂಡಿದ್ದು, ಬಸವಣ್ಣನವರು ಎಲ್ಲರೂ ಸಮಾನರು ಎಂದು ಸಾರಿದವರು ಎಂದರು.

ಜಾತಿ ಪದ್ಧತಿ, ಮೂಢನಂಬಿಕೆಯನ್ನು ಹೋಗಲಾಡಿಸಲು ಬಸವಣ್ಣ ಶ್ರಮಿಸಿದ್ದಾರೆ. ಹೆಣ್ಣಿಗೆ ಸ್ವಾತಂತ್ರೃವೇ ಇರಲಿಲ್ಲ. ಸಕಲ ಜೀವರಾಶಿಗೂ ಬಸವಣ್ಣನವರು ಲೇಸನ್ನು ಬಯಸಿದವರು. ವೈಚಾರಿಕ ಚಿಂತನೆಯನ್ನು ಬಸವಾದಿ ಶರಣರು ತಂದು ಕೊಟ್ಟರು. ಮಕ್ಕಳಿಗೆ ಬಸವಣ್ಣನವರ ಆದರ್ಶ, ತತ್ವ, ಆಚಾರ, ವಿಚಾರಗಳನ್ನು ಹೇಳಿಕೊಡುವುದರ ಮೂಲಕ ಉತ್ತಮ ಪ್ರಜೆಗಳಾಗಿ ರೂಪಿಸಬೇಕು ಎಂದು ತಿಳಿಸಿದರು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಸಮ ಸಮಾಜದ ಪರಿಕಲ್ಪನೆಯನ್ನು ಬಸವಣ್ಣ 12ನೇ ಶತಮಾನದಲ್ಲಿ ಹೊಂದಿದ್ದರು. ಅವರ ಆದರ್ಶ, ತತ್ವ, ಸಿದ್ಧಾಂತಗಳು ಇಂದಿಗೂ ಅನುಕರಣೀಯ. ಬಸವ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಸಿಎಂ ಸಿದ್ದರಾಮಯ್ಯನವರೇ ಮೂಲ ಕಾರಣೀಭೂತರಾಗಿದ್ದಾರೆ. ಬಸವಣ್ಣ ಜೀವನ ಚರಿತ್ರೆ ಬಗ್ಗೆ ಶಾಲಾ ಮಕ್ಕಳಿಗೆ ಹೇಳಿಕೊಡುವ ಕಾರ್ಯ ಸರ್ಕಾರ ಮಾಡಬೇಕು ಎಂದರು.

ಅತಿಥಿಗಳೆಲ್ಲರೂ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ಮಡಬೂರಿನ ಶರಣ, ಶರಣೆಯಿಂದ ಭಜನಾ ಕಾರ್ಯಕ್ರಮ ಜರುಗಿತು. ಪಪಂ ಅಧ್ಯಕ್ಷೆ ಜುಬೇದಾ, ಸಿಪಿಐ ಗುರುದತ್ ಕಾಮತ್, ವೀರಶೈವ ಸಮಾಜದ ಮುಖಂಡ ವೈ.ಎಸ್.ರವಿ, ಮೆಣಸೂರು ಬಸವಕೇಂದ್ರದ ಅಧ್ಯಕ್ಷ ಶಾಂತರಾಜ್, ಚಿತ್ರದುರ್ಗ ಮುರುಘಾ ಮಠದ ಸಂಚಾಲಕ ಪುಟ್ಟಸ್ವಾಮಿ, ಸೋಮೇಶ್, ಆಂಜನೇಯ, ಲಂಕೇಶದೇವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net