ಸಾಹಿತ್ಯ ಲೋಕಕ್ಕೆ ಕವಿತಾಕೃಷ್ಣ ಕೊಡುಗೆ ಅಪಾರ

KavithaKrishna
Published on

ತುಮಕೂರು: ತಮ್ಮ ಜೀವಿತಾವಧಿಯ ಕೊನೆಯವರೆಗೂ ಸಾಹಿತಿ ಡಾ.ಕವಿತಾಕೃಷ್ಣ ಅವರು ನಿರಂತರ ಸಾಹಿತ್ಯ ಕೃಷಿ ಮಾಡಿ ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದರು ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಡಾ.ಜಪಾನಂದ ಸ್ವಾಮೀಜಿ ಸ್ಮರಿಸಿದರು.

ತಾಲೂಕಿನ ಕೌತಮಾರನಹಳ್ಳಿಯ ಆಕಾಶ್​ ಫಾರಂನಲ್ಲಿ ಸೋಮವಾರ ಡಾ.ಕವಿತಾಕೃಷ್ಣ ಸಾಹಿತ್ಯ ಮಂದಿರ ಹಾಗೂ ಕವಿತಾಕೃಷ್ಣ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ನುಡಿನಮನ ಹಾಗೂ ಸಾಹಿತ್ಯ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಕವಿತಾಕೃಷ್ಣರ ಕೃತಿಗಳು ಸಾಹಿತ್ಯ ಪೇಮಿಗಳೊಂದಿಗೆ ಸದಾ ಜೀವಂತವಾಗಿವೆ ಎಂದರು.

ಕವಿತಾಕೃಷ್ಣ ಅವರು ವಿವಿಧ ಸಾಹಿತ್ಯ ಪ್ರಾಕಾರದ ಸುಮಾರು 200 ಕೃತಿಗಳನ್ನು ರಚಿಸಿದ್ದಾರೆ. ಅಷ್ಟು ಕೃತಿಗಳನ್ನು ರಚಿಸುವುದು ಸುಲಭವಾದ ವಿಚಾರವಲ್ಲ. ಅವರಿಗಿದ್ದ ಸಾಹಿತ್ಯ ಜ್ಞಾನ, ಬರವಣಿಗೆ ಸಾಮರ್ಥ್ಯದಿಂದ ಅದು ಸಾಧ್ಯವಾಗಿದೆ. ಕನ್ನಡ ಸಾಹಿತ್ಯ ವಲಯದಲ್ಲಿ ಅಜರಾಮರಾಗಿದ್ದಾರೆ. ಅವರ ಸಾಹಿತ್ಯ ಸೇವೆಯನ್ನು ಜಿಲ್ಲೆಯ ಜನ ಸದಾ ಸ್ಮರಿಸಬೇಕು. ಕವಿತಾಕೃಷ್ಣ ಸಾಹಿತ್ಯ ಮಂದಿರ ಹಾಗೂ ಅಭಿಮಾನಿಗಳು ಕವಿತಾಕೃಷ್ಣರ ಹೆಸರಿನಲ್ಲಿ ಸಾಹಿತ್ಯ ಕಾರ್ಯಕ್ರಮಗಳನ್ನು ಮುಂದುವರೆಸಿ ಅವರ ಕೊಡುಗೆ ಗೌರವಿಸಿ, ಸಾಹಿತ್ಯ ಸೇವೆ ಮುಂದುವರೆಸುವಂತೆ ಸಲಹೆ ನೀಡಿದರು.

ಡಾ.ಕವಿತಾಕೃಷ್ಣ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷರಾಗಿ, ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪರಿಷತ್ತಿನೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಅವರ ನಿರಂತರ ಸಾಹಿತ್ಯ ಕ್ಷೇತ್ರದ ಒಡನಾಟ, ಸಾಹಿತ್ಯ ಪ್ರೇಮ ಹಲವರಿಗೆ ಸಾಹಿತ್ಯ ಕೃಷಿಯಲ್ಲಿ ತೊಡಗಲು ಪ್ರೇರಣೆಯಾಗಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ಕೆ.ಎಸ್​.ಸಿದ್ಧಲಿಂಗಪ್ಪ ಹೇಳಿದರು.

ವೃತ್ತಕ್ಕೆ ಕವಿತಾಕೃಷ್ಣ ಹೆಸರಿಡಲಿ: ಡಾ.ಕವಿತಾಕೃಷ್ಣ ಅವರು ಶ್ರೇಷ್ಠ ಸಾಹಿತಿ ಮಾತ್ರವಲ್ಲದೆ ಅಪ್ರತಿಮ ಕನ್ನಡ ಹೋರಾಟಗಾರರೂ ಆಗಿದ್ದರು. ಕವಿತಾಕೃಷ್ಣರ ಸಾಹಿತ್ಯ ಸೇವೆ ಚಿರಸ್ಥಾಯಿಯಾಗಬೇಕು. ಅವರ ಹೆಸರಿನಲ್ಲಿ ಜಿಲ್ಲಾಡಳಿತ ಗ್ರಂಥಾಲಯ ಸ್ಥಾಪಿಸಬೇಕು. ಕ್ಯಾತಸಂದ್ರದ ಪ್ರಮುಖ ವೃತ್ತಕ್ಕೆ ಕವಿತಾಕೃಷ್ಣರ ಹೆಸರು ಇಡಬೇಕು. ಅವರ ಹೆಸರಿನಲ್ಲಿ ಟ್ರಸ್ಟ್​ ಸ್ಥಾಪಿಸಿ ಪ್ರತಿ ವರ್ಷ ಸಾಹಿತ್ಯ ಸಾಧಕರಿಗೆ ಪ್ರಶಸ್ತಿ ನೀಡಬೇಕು ಎಂದು ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್​ ಮನವಿ ಮಾಡಿದರು.

ಕವಿತಾಕೃಷ್ಣ ಅವರ ಪತ್ನಿ ರತ್ನಮ್ಮ, ಪುತ್ರ ಅರವಿಂದಕೃಷ್ಣ, ಲೇಖಕಿ ಕಮಲಾ ಬಡ್ಡಿಹಳ್ಳಿ, ಪರಿಮಳಾ ಸತೀಶ್​ ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net