ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಆದೇಶ ಕನ್ನಡಿಗರ ಮರಣ ಶಾಸನ

K
Published on

ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯ ಆದೇಶವು ಕನ್ನಡಿಗರ ಪಾಲಿಗೆ ಮರಣ ಶಾಸನವಾಗಿದ್ದು, ಇದರ ಪಾಲನೆಯಿಂದ ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ಎರಡು ಕೋಟಿ ಜನರಿಗೆ ಕುಡಿಯುವ ನೀರು ಸಹ ದೊರೆಯುವುದಿಲ್ಲ ಎಂದು ಕನ್ನಡ ಗೆಳೆಯರ ಬಳಗ ಆತಂಕ ವ್ಯಕ್ತಪಡಿಸಿದೆ.

ಕಣಿವೆಯಲ್ಲಿ ಕಳೆದ 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ (ಶೇ. 44ಕ್ಕಿಂತ ಕಡಿಮೆ) ಆಗಿರುವುದಾಗಿ ಅಂಕಿ-ಅಂಶಗಳು ಹೇಳಿವೆ. ಆದರೂ ತಮಿಳುನಾಡು ನೀರಿರಲಿ ಇಲ್ಲದಿರಲಿ, ರಾಜ್ಯದ ಜನರು ಕುಡಿಯಲು ನೀರಿಲ್ಲದೆ ಪರಿತಪಿಸಿದರೂ ಸರಿ ತನ್ನ ಪಾಲು ಬಂದು ಬಿಡಲಿ ಎಂಬ ಅಮಾನವೀಯ ಧೋರಣೆ ತಾಳಿದೆ. ಇದಕ್ಕೆ ಪೂರಕವಾಗಿ 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ನೀರು ನಿರ್ವಹಣಾ ಸಮಿತಿ ನೀಡಿರುವ ತೀರ್ಪು ಸರಿಯಿಲ್ಲ ಎಂದು ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ಸಮಿತಿಯ ಆದೇಶ ಆಳುವ ಸರ್ಕಾರಕ್ಕೆ ಮಾಡಿರುವ ಅವಮಾನವಾಗಿದೆ. ದೇಶದಲ್ಲಿ ಜಲ ಹಂಚಿಕೆ ಕಾನೂನುಗಳು ನದಿ ಪಾತ್ರದ ಕೆಳ ರಾಜ್ಯದ ಪರವಾಗಿದ್ದು, ನ್ಯಾಯಾಲಯದಿಂದಾಗಲಿ, ಕೇಂದ್ರ ಸರ್ಕಾರದಿಂದಾಗಲಿ ಕರ್ನಾಟಕಕ್ಕೆ ನ್ಯಾಯ ಸಿಗುವುದಿಲ್ಲ. ಹಾಗಾಗಿ ನೀರಾವರಿ ತಜ್ಞ ಎಸ್.ಜಿ. ಬಾಳೆಕುಂದ್ರಿ ಹೇಳಿರುವಂತೆ ‘ಕಾವೇರಿ ವಿವಾದ ಪರಿಹಾರಕ್ಕೆ ಸಂವಿಧಾನ ಬಿಕ್ಕಟ್ಟು ನಿರ್ಮಾಣ ಒಂದೇ ಉಳಿದಿರುವ ಮಾರ್ಗ’ ಎಂಬುದನ್ನು ರಾಜ್ಯ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಪರಿಗಣಿಸಬೇಕು ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ್ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net