

ಬಾಗಲಕೋಟೆ: ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಡಳಿತ ಭವನ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಮೆರವಣಿಗೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಧರಣಿ ನಡೆಸಿದ ಕರವೇ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸಬಾರದು ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ, ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಇದೆ, ರೈತರ ಜಮೀನುಗಳಿಗೆ ನೀರಿಲ್ಲದೇ ಬೆಳೆ ನಷ್ಟವಾಗುತ್ತಿದೆ, ಅದರಲ್ಲೂ ಕಾವೇರಿ ಕಣಿವೆಯಲ್ಲಿ ಭಯಾನಕ ಸ್ಥಿತಿ ನಿರ್ಮಾಣವಾಗಿದ್ದು ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶ ದುರದೃಷ್ಟಕರ, ಯಾವುದೇ ಕಾರಣಕ್ಕೂ ಆದೇಶ ಪಾಲಿಸಬಾರದು, ಈ ದಿಸೆಯಲ್ಲಿ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಅದನ್ನು ಬಿಟ್ಟು ಆದೇಶ ಪಾಲಿಸಲು ಮುಂದಾದರೆ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಕಾರ್ಯಕರ್ತರು ಎಚ್ಚರಿಸಿದರು.
ರಾಜ್ಯದ ಸಂಸದರು ರಾಜ್ಯದ ಪರಿಸ್ಥಿತಿಯನ್ನು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಅಗತ್ಯವಾದರೆ ರಾಜೀನಾಮೆಗೆ ಮುಂದಾಗುವ ಮೂಲಕ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.
ಕರವೇ ಜಿಲ್ಲಾ ಅಧ್ಯಕ್ಷ ಬಸವರಾಜ ಧರ್ಮಂತಿ, ಬಸವರಾಜ ಅಂಬಿಗೇರ, ಮಲ್ಲು ಕಟ್ಟಿಮನಿ, ಭಾಗ್ಯ ಬೆಟಗೇರಿ, ರಾಜೇಶ್ವರಿ ಹಿರೇಮಠ, ಸವಿತಾ ಹಿರೇಮಠ, ವಹೀದಾ ನದಾಫ, ರೋಹಿತ ಬಾರಕೇರ, ಗಣಪತಿ ಭೋವಿ, ಅಶೋಕ ಪೂಜಾರಿ, ಸಂಗಮೇಶ ಅಂಬಿಗೇರ, ಕಿರಣ ಗಾಳಿ ಇತರರು ಇದ್ದರು.