

ನಂಜನಗೂಡು: ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ ಅವರ ಚಾಣಾಕ್ಷತನದಿಂದ ದೊಡ್ಡಕವಲಂದೆ ಗ್ರಾಮ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಬಂದಿದೆ. ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪರ್ಹೀನ್ ಬೇಗಂ, ಉಪಾಧ್ಯಕ್ಷರಾಗಿ ಸಿ. ಮಂಜುನಾಥ್ ಸೋಮವಾರ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಲ್ಲಿ ಚುನಾವಣೆಯನ್ನು ನಡೆಸಲಾಯಿತು. ಈ ಹಿಂದೆ ಅಧ್ಯಕ್ಷರಾಗಿದ್ದ ಜ್ಯೋತಿ ವೆಂಕಟೇಶ್, ಉಪಾಧ್ಯಕ್ಷರಾಗಿದ್ದ ಆರ್.ಪ್ರಶಾಂತ್‌ಕುಮಾರ್ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, 20 ಸದಸ್ಯರ ಬಲವನ್ನು ಹೊಂದಿರುವ ದೊಡ್ಡಕವಲಂದೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಧ್ಯಕ್ಷ ಸ್ಥಾನಕ್ಕೆ ಸುಲ್ತಾನ ಬೇಗಂ ಮತ್ತು ಪರ್ಹೀನ್ ಬೇಗಂ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಿ.ಮಂಜುನಾಥ್ ನಾಮಪತ್ರವನ್ನು ಸಲ್ಲಿಸಿದರು. ಬಳಿಕ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಸುಲ್ತಾನ ಬೇಗಂ ಅವರು 9 ಮತಗಳನ್ನು ಪಡೆದುಕೊಂಡು ಸೋಲು ಅನುಭವಿಸಿದರು. ಪರ್ಹೀನ್ ಬೇಗಂ 11 ಮತಗಳನ್ನು ಪಡೆದು ಜಯಭೇರಿ ಬಾರಿಸುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಸಿ.ಮಂಜುನಾಥ್ ಒಬ್ಬರೇ ನಾಮಪತ್ರವನ್ನು ಸಲ್ಲಿಸಿದ ಕಾರಣ ಅವರನ್ನು ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಪರ್ಹೀನ್ ಬೇಗಂ ಉಪಾಧ್ಯಕ್ಷರಾಗಿ ಸಿ.ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಬಿ.ಮಂಜುಳಾ ಘೋಷಣೆ ಮಾಡಿದರು. ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು.
ನೂತನ ಅಧ್ಯಕ್ಷೆ ಪರ್ಹೀನ್ ಬೇಗಂ ಮಾತನಾಡಿ, ಸಾರ್ವಜನಿಕರ ಕುಂದು ಕೊರತೆ ಬಗೆಹರಿಸಲು ಪಂಚಾಯಿತಿಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಸಭೆಯನ್ನು ನಡೆಸಿ ಸ್ಥಳದಲ್ಲಿಯೇ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಸದಸ್ಯರಾದ ಜಿ.ಕೆ ಪ್ರಕಾಶ್, ಅಜಂಉಲ್ಲಾಖಾನ್, ನಸ್ರುಲ್ಲಾಖಾನ್, ಸೈಯಾದಾ ಹೀನ ಕೌಸರ್, ಶಮ್ಸಾಉನ್ನೀಸಾ, ಸಿದ್ದಲಿಂಗಪ್ಪ, ನವೀನ್, ಮೀನಾಕ್ಷಿ ಪಟೇಲ್ ಮಾದಶೆಟ್ಟಿ, ಪಿಡಿಒ ನಿರ್ಮಲಾ, ಯೂತ್ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸಮೀಉಲ್ಲಾ, ಮುಖಂಡರಾದ ಜಾವರ್, ಗುರುಪಾದಸ್ವಾಮಿ, ಎಂ.ಮಹದೇವಯ್ಯ, ಪಿ.ಸಿದ್ದು, ಟಿಎನ್ ಕೃಷ್ಣ, ಶಂಕರ್, ಟಿ.ನಾಗೇಶ್, ಪ್ರಭು, ಖಲೀಲ್ ಅಹ್ಮದ್, ನಾಜೀಮ್ ಉಲ್ಲಾಖಾನ್, ಹೊನ್ನಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.