

ಹುಣಸೂರು: ಹೆಣ್ಣು ಮಕ್ಕಳ ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿರುವ ತಾಲೂಕಿನ ಕಟ್ಟೆಮಳಲವಾಡಿಯ ಶಕ್ತಿದೇವತೆ ಸಿಡಿಯಮ್ಮ ಜಾತ್ರೆ ಮೇ 10ರಂದು ಜರುಗಲಿದೆ.
ಅಂದು ಸಂಜೆ 4.30 ಗಂಟೆಗೆ ಗ್ರಾಮದ ಸಿಡಿಮಾಳದಲ್ಲಿ ಸಿಡಿಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ. ಸುತ್ತಮುತ್ತಲ 16 ಗ್ರಾಮಗಳ ಜನರು ಜಾತಿ, ಮತ, ಧರ್ಮ, ಪಂಥಗಳೆಂಬ ಭೇದ ಭಾವವಿಲ್ಲದೆ ಸಾಮರಸ್ಯವನ್ನು ಮೂಡಿಸುವ ಸಿಡಿಯಮ್ಮ ಜಾತ್ರೆಗೆ 300 ವರ್ಷಗಳ ಇತಿಹಾಸವಿದೆ. ಕಟ್ಟೆಮಳಲವಾಡಿ ಸುತ್ತಲ ಗ್ರಾಮಗಳಾದ ಕಟ್ಟೆಮಳಲವಾಡಿ ಕೊಪ್ಪಲು, ಬಿಳಿಗೆರೆ, ಅಗ್ರಹಾರ, ಮೈಲಾಂಬೂರು, ಮರೂರು, ಬೆಳ್ತೂರು, ಕಲ್ಕುಣಿಕೆ, ತಟ್ಟೆಕೆರೆ, ಕಿರಂಗೂರು ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳು ಸೇರಿ ಜಾತ್ರೆಯನ್ನು ಸಂಭ್ರಮದಿಂದ ನಡೆಸುತ್ತಾರೆ.
ಸಮುದಾಯಕ್ಕೊಂದು ಜವಾಬ್ದಾರಿ: ಕಟ್ಟೆಮಳಲವಾಡಿ ಗ್ರಾಮದಲ್ಲಿ 16ಕ್ಕೂ ಹೆಚ್ಚು ಸಮುದಾಯದವರು ವಾಸಿಸುತ್ತಿದ್ದಾರೆ. ಎಲ್ಲ ಸಮುದಾಯದವರು ತಮ್ಮದೇ ಆದ ಜವಾಬ್ದಾರಿಯನ್ನು ಜಾತ್ರೆಯಲ್ಲಿ ನಿರ್ವಹಿಸುತ್ತಾರೆ. ಬ್ರಾಹ್ಮಣರು ಉತ್ಸವ ಮೂರ್ತಿಯ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಂಡು ರಥೋತ್ಸವದ ದಿನ ರಥದಲ್ಲಿ ಪ್ರತಿಷ್ಠಾಪಿಸುವವರೆಗೂ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಡುತ್ತಾರೆ. ಗ್ರಾಮದ ಬಲಿಜ ಸಮಾಜಕ್ಕೆ ಇಡೀ ಜಾತ್ರೆಯ ಉಸ್ತುವಾರಿ. ಮೇ 12ರಂದು ಸಿಡಿಯಮ್ಮ ರಥೋತ್ಸವದಂದು ದೇವಿಗೆ ಬಲಿ ಕಾರ್ಯವನ್ನು ಇದೇ ಸಮಾಜದವರು ನಡೆಸಿಕೊಡುತ್ತಾರೆ. ನಾಯಕ ಸಮಾಜವು ಸಿಡಿಯಮ್ಮ ದೇವಾಲಯದ ದೈನಂದಿನ ಪೂಜಾ ಕಾರ್ಯಗಳನ್ನು ನಡೆಸುತ್ತಿದೆ. ಸಿಡಿಯಲ್ಲಿ ಕೂರುವ ದೇವರು ಮುಖ್ಯವಾಗಿ 5 ಗ್ರಾಮಗಳಿಂದ ಬರುತ್ತವೆ. ಈ ಪೈಕಿ ನಾಯಕ ಸಮಾಜದ ಮೂರು ಮತ್ತು ಮಡಿವಾಳ ಸಮಾಜದ ಎರಡು ದೇವರುಗಳ ಉತ್ಸವ ಮೂರ್ತಿಯೊಂದಿಗೆ ಅರ್ಚಕರು ಆಗಮಿಸುತ್ತಾರೆ. ಕಟ್ಟೆಮಳಲವಾಡಿ ಕೊಪ್ಪಲು, ಕಟ್ಟಮಳಲವಾಡಿ ಮತ್ತು ಮರೂರು ಗ್ರಾಮದ ದೇವರುಗಳು, ಮಡಿವಾಳ ಸಮಾಜದಿಂದ ಕಲ್ಕುಣಿಕೆ ಮತ್ತು ಕಟ್ಟೆಮಳಲವಾಡಿಯ ದೇವರುಗಳು ಸಿಡಿ ರಥದಲ್ಲಿ ಪಾಲ್ಗೊಳ್ಳಲಿವೆ.
ಗ್ರಾಮದ ಆದಿಜಾಂಬವ ಮತ್ತು ಆದಿ ಕರ್ನಾಟಕ ಸಮಾಜದ ಜನರು ತಮಟೆ ಬಾರಿಸುವ ಮತ್ತು ಕೊಂಬು ಕಹಳೆ ಊದುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಸಿಡಿರಥ ತಯಾರಿಸಲು ಮರವನ್ನು ಪ್ರತಿವರ್ಷ ಗ್ರಾಮದ ಒಬ್ಬರು ನೀಡುತ್ತಾರೆ. ಈ ಬಾರಿ ಹೊನ್ನೇನಹಳ್ಳಿಯ ಮರಾಠ ಸಮಾಜದ ಮುಖಂಡರು ಮರವನ್ನು ನೀಡಿದ್ದಾರೆ. ಗ್ರಾಮದ ಉಪ್ಪಾರ ಸಮಾಜದ ಜನರು ಗ್ರಾಮಸ್ಥರೊಡಗೂಡಿ ತೋಟಕ್ಕೆ ತೆರಳಿ ಮರವನ್ನು ಆಯ್ದು, ಅದನ್ನು ಕತ್ತರಿಸಿ ತರುತ್ತಾರೆ. ಬಿಳಿಗೆರೆಯ ವಿಶ್ವಕರ್ಮ ಸಮಾಜ ಸಿಡಿ ರಥವನ್ನು ನಿರ್ಮಿಸುತ್ತಾರೆ. ಸಿಡಿ ಜಾತ್ರೆಯ ದಿನ ಸಿಡಿಯನ್ನು ತಿರುಗಿಸುವ ಜವಾಬ್ದಾರಿ ಅಗ್ರಹಾರದ ಯಜಮಾನರದ್ದು. ಮರ ಕಡಿದ ತಂದ ದಿನದಿಂದ ಆರಂಭಗೊಂಡು ದೇವಿಯ ರಥೋತ್ಸವ ಅಂತಿಮವಾಗುವ 10 ದಿನಗಳವರೆಗೆ ಇಡೀ ಗ್ರಾಮದಲ್ಲಿ ಮಾಂಸಾಹಾರ ಸೇವನೆಯನ್ನು ಎಲ್ಲರೂ ತ್ಯಜಿಸುತ್ತಾರೆ.
ಶತಮಾನಗಳಿಂದ ಸಿಡಿ ಜಾತ್ರೆಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ನಮ್ಮ ನಂಬಿಕೆ, ಶ್ರದ್ಧೆ ಮತ್ತು ಎಲ್ಲರಿಗೂ ಒಳ್ಳೆಯದಾಗಲೆಂಬ ಬೇಡಿಕೆಯನ್ನು ದೇವಿ ಎಂದೂ ತಿರಸ್ಕರಿಸಿಲ್ಲ. ಗ್ರಾಮದಲ್ಲಿ ಎಲ್ಲರೂ ಒಂದಾಗಿ ಬಾಳಲು ಆಕೆ ಆಶೀರ್ವದಿಸಿದ್ದಾಳೆ. ಅದರಂತೆ ನಾವೆಲ್ಲರೂ ಒಂದಾಗಿ ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತೇವೆ.
ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ದಲಿತ ಸಮಾಜದವರಿಗೂ ಈ ಜಾತ್ರೆಯಲ್ಲಿ ಜವಾಬ್ದಾರಿಗಳನ್ನು ನೀಡಿ ಅವರನ್ನು ಒಳಗೊಂಡು ಜಾತ್ರೆ ನಡೆಸುತ್ತಿರುವುದು ಸಮಾನತೆಗೆ ನೀಡಿರುವ ಆದ್ಯತೆಯನ್ನು ತೋರುತ್ತದೆ. ಹಿಂದಿನಿಂದಲೂ ಈ ಪದ್ಧತಿ ಅನುಸರಿಸುಕೊಂಡು ಬಂದಿದ್ದೇವೆ. ಸಮಾಜಕ್ಕೆ ನಾವು ಇಂತಹ ಸಂದೇಶವನ್ನೇ ನೀಡಬೇಕಿರುವುದು. ಸೌಹಾರ್ದ ಕಾಪಾಡಿಕೊಂಡು ಅವರವರ ಜವಾಬ್ದಾರಿ ನಿರ್ವಹಿಸುತ್ತಿರುವುದು ಸಂತಸ ತಂದಿದೆ.
ನಿಂಗರಾಜ ಮಲ್ಲಾಡಿ, ಜಿಲ್ಲಾ ಸಂಚಾಲಕ, ದಲಿತ ಸಂಘರ್ಷ ಸಮಿತಿ