

ಗೋಣಿಕೊಪ್ಪ: ಶಿವಾಜಿ ಸೇನೆ ವತಿಯಿಂದ ನಗರದ ಕಾವೇರಿ ಕಲಾ ವೇದಿಕೆ ಸಮೀಪವಿರುವ ಮೈದಾನದಲ್ಲಿ ರಾಜ್ಯ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಿತು.
2ನೇ ವರ್ಷದ ಕಬಡ್ಡಿ ಪಂದ್ಯಾವಳಿಯು 2 ದಿನಗಳ ಕಾಲ ಯಶಸ್ವಿಯಾಗಿ ಜರುಗಿತು. ಈ ಬಾರಿ ರಾಜ್ಯದ ವಿವಿಧ ಭಾಗದಿಂದ 16 ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದವು. ಶಿವಾಜಿ ಸೇನೆಯ ಅಧ್ಯಕ್ಷ ಎ.ಎನ್.ಅಣ್ಣಪ್ಪ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಲು ಹೆಚ್ಚಿನ ಅವಕಾಶ ಸಿಗಲಿದೆ. ಕೊಡಗಿನಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಲಭಿಸುತ್ತಿದ್ದು, ವಿಶೇಷವಾಗಿ ಗ್ರಾಮೀಣ ಕ್ರೀಡೆಗೆ ಆದ್ಯತೆ ನೀಡುವಂತಾಗಲಿ ಎಂದರು.
ಮೈಸೂರಿನ ಗೋಪಾಲಗೌಡ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಶುಶ್ರೂತ್‌ಗೌಡ ಮಾತನಾಡಿ, ಯುವಕರು ಕೇವಲ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಶಾರೀರಿಕವಾಗಿ ಆರೋಗ್ಯವಂತರಾಗಲು ಕ್ರೀಡೆ ಸಹಕಾರಿ. ವಿಶೇಷವಾಗಿ ಗ್ರಾಮೀಣ ಕ್ರೀಡೆಗೆ ತನ್ನದೆ ಆದ ವೈಶಿಷ್ಟ್ಯವಿದ್ದು, ಅದರಲ್ಲಿ ನಾನಾ ತರಹದ ಪ್ರಯೋಜನಗಳು ದೊರೆಯುತ್ತವೆ ಎಂದರು.
ದಾನಿಗಳಾದ ನವರತ್ನ ಫೈನಾನ್ಸ್ ಅಧ್ಯಕ್ಷ ಪಿ.ಎ.ಕುಮಾರ್, ಜಯಲಕ್ಷ್ಮೀ ಜುವೆಲ್ಲರಿ ಮಾಲೀಕ ಎಂ.ಜಿ.ಮೋಹನ್, ಕೂರ್ಗ್ ಕ್ರಿಪ್ಸ್ ಮಾಲೀಕ ಟಿ.ಟಿ.ಜಾನ್ ಥೋಮಸ್, ಹೊಸೂರು ಗ್ರಾಪಂ ಸದಸ್ಯ ಕೊಲ್ಲೀರ ಧನು ಪೂಣಚ್ಚ, ಶಿವಾಜಿ ಯುವ ಸೇನೆಯ ಗೌರವಾಧ್ಯಕ್ಷ ಕೊಲ್ಲೀರ ದಯಾ ಕಾವೇರಿಯಪ್ಪ, ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಕಾರ್ಯದರ್ಶಿ ಶೀಲಾ ಬೋಪಣ್ಣ, ಕಳತ್ಮಾಡು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಭಾಗ್ಯವತಿ, ಶಿವಾಜಿ ಯುವ ಸೇನೆಯ ಉಪಾಧ್ಯಕ್ಷ ಸಿಂಗಿ ಸತೀಶ್, ಸಮಿತಿಯ ಪದಾಧಿಕಾರಿಗಳಾದ ಎ.ಜಿ.ಸುರೇಶ್, ಜಿ.ಪಿ.ಸ್ವಾಮಿ, ರಾಜೇಶ್‌ರೈ ಮತ್ತಿತರರು ಹಾಜರಿದ್ದರು. ಡಾ.ಶುಶ್ರೂತ್‌ಗೌಡ ಅವರನ್ನು ಸನ್ಮಾನಿಸಲಾಯಿತು.
ಪ್ರಶಸ್ತಿ ಮುಡಿಗೇರಿಸಿಕೊಂಡ ಕಾಸಗೋಡು ರೈಸಿಂಗ್ ತಂಡ: ಅತ್ಯಂತ ರೋಚಕತೆಯಿಂದ ಕೂಡಿದ ಫೈನಲ್ ಪಂದ್ಯದಲ್ಲಿ ಎಸ್‌ಡಿಎಂ ಉಜಿರೆ ವಿರುದ್ಧ ಕಾಸಗೋಡು ರೈಸಿಂಗ್ ತಂಡ ಜಯಗಳಿಸುವ ಮೂಲಕ 2ನೇ ವರ್ಷದ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಉಜಿರೆಯ ಎಸ್‌ಡಿಎಂ ತಂಡ ದ್ವಿತೀಯ ಸ್ಥಾನ ಪಡೆದರೆ, ಮೂಡುಬಿದಿರೆ ಆಳ್ವಾಸ್ ತಂಡ ತೃತೀಯ ಸ್ಥಾನ ಪಡೆಯಿತು.