‘ಕನ್ನಡದ ಧ್ರುವತಾರೆ’ ನಟ ರಮೇಶ್ ಅರವಿಂದ್ ಅವರ ಮಾತು-ಕತೆ

Kannada
Published on

ಬೆಂಗಳೂರು: ಕಲಾವಿದನಾಗಿದ್ದು ನನ್ನ ಅದೃಷ್ಟ. ಚಿತ್ರರಂಗ ಬಿಟ್ಟು ಬೇರೆ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರೂ ಈ ಮಟ್ಟದ ಜನಪ್ರೀತಿ ದೊರಕುತ್ತಿರಲಿಲ್ಲ ಎಂದು ನಟ ರಮೇಶ್ ಅರವಿಂದ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇದೇ ಮೊದಲ ಬಾರಿಗೆ ಅರಂಭಿಸಿರುವ ವಿಶಿಷ್ಠ ‘ಕನ್ನಡದ ಧ್ರುವತಾರೆ’ ಕಾರ್ಯಕ್ರಮದ ಆರಂಭದ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಬಾಲ್ಯದಲ್ಲೇ ಕಲಾವಿದನಾಗಬೇಕೆಂಬ ತಮ್ಮ ಕನಸಿಗೆ ಸಿಕ್ಕ ಪ್ರೇರಣೆಯನ್ನು ನೆನಪು ಮಾಡಿಕೊಂಡ ಅವರು, ಪೌರಾಣಿಕ, ಐತಿಹಾಸಿಕ ಚಿತ್ರಗಳಲ್ಲಿ ಭಾಗವಹಿಸುವ ಅವಕಾಶಕ್ಕಾಗಿ ಕಾಯುತ್ತಿದ್ದು, ಬಸವಣ್ಣನ ಪಾತ್ರ ವಹಿಸಲು ದೊರಕಿದ ಅವಕಾಶವನ್ನು ಸ್ಮರಿಸಿಕೊಂಡರು.

ಹಲವು ಜೀವನ ಸಾಧ್ಯತೆಗಳನ್ನು ತಮ್ಮದಾಗಿಸಿಕೊಂಡಿರುವುದೇ ಕಲಾವಿದನ ವಿಶೇಷ. ಎಲ್ಲರ ಗಡಿಯಾರದಲ್ಲಿಯೂ ಸಮಯ ಒಂದೇ ಇರುತ್ತದೆ. ಆದರೆ ಅದನ್ನು ನಾವು ಹೇಗೆ ಸದುಪಯೋಗಪಡಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ ಎಂದು ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಇದೇ ವೇಳೆ ಚಿತ್ರರಂಗ ತಾಂತ್ರಿಕವಾಗಿ ಬೆಳೆದಿದ್ದರೂ ಅಂತರಂಗದಲ್ಲಿ ಸೊರಗಿತ್ತಿರುವ ಕುರಿತು ಬಗ್ಗೆ ಪ್ರಸ್ತಾಪಿಸಿದ ಅವರು, ಇಂದು ಯುವಕರು ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ, ಕನ್ನಡತನವನ್ನು ಉಳಿಸಿಕೊಂಡಿದ್ದಾರೆ. ಅಂತಹವರ ಅಭಿವ್ಯಕ್ತಿ ಕ್ರಮಗಳನ್ನು ಗುರುತಿಸುವ ಕೆಲಸ ಆಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ,‘‘ ಸಾಧನೆ ಇಲ್ಲದೇ ಸತ್ತರೆ ಅಂತಹ ಸಾವಿಗೆ ಅರ್ಥವಿಲ್ಲ, ಏನೂ ಇಲ್ಲದೇ ಸತ್ತರೇ ವ್ಯವಸ್ಥೆಗೆ ಅರ್ಥವಿಲ್ಲ’. ಆದ್ದರಿಂದ ಸಾಧನೆ ಮಾಡುವವರು ತಾಳ್ಮೆ ಹೊಂದಿರಬೇಕು. ನಿರಂತರ ಪ್ರಯತ್ನದಲ್ಲಿ ಇದ್ದಾಗ ಸಾರ್ಥಕ ಸಾಧಕರಾಗಲು ಸಾಧ್ಯ, ತಕ್ಷಣ ಸಾಧನೆಯ ಉತ್ತುಂಗಕ್ಕೆ ಏರಬೇಕು ಎನ್ನುವವರು ಅಷ್ಟೇ ಬೇಗನೆ ಕೆಳಗೆ ಬಿದ್ದು ಬಿಡುತ್ತಾರೆ. ನಿರಂತರ ಪ್ರಯತ್ನ ಮಾಡುವವರು ನಿಜವಾದ ಸಾಧಕರಾಗುತ್ತಾರೆ. ಸಮಾಜದಲ್ಲಿ ಸಕಾರಾತ್ಮಕ ಭಾವನೆ ಕಡಿಮೆಯಾಗುತ್ತಿದ್ದು, ನಕಾರಾತ್ಮಕ ಭಾವನೆಗಳು ಹೆಚ್ಚಾಗುತ್ತಿವೆ ಎಂದ ಅವರು, ಸಂತೋಷದಿಂದ ಕೂಡಿಬಾಳುವುದನ್ನು ಕಲಿಯಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, ನಿರಂತರ ಸಾಧನೆ ಮಾಡುತ್ತ ತೆರೆಯ ಮರೆಯಲ್ಲಿ ಇರುವ ಸಾಧಕರನ್ನು ಕರೆಸಿ ಜನರೊಂದಿಗೆ ಸಂವಾದ ಮಾಡುವ ಮೂಲಕ ಅವರ ಸಾಧನೆಯನ್ನು ಸಮಾಜಕ್ಕೆ ತೋರಿಸುವ ಜೊತೆಗೆ ಇನ್ನೂ ಹತ್ತಾರು ಜನರು ಅವರಿಂದ ಪ್ರೇರಣೆಗೊಳ್ಳಬೇಕು ಎಂಬುದು ಕನ್ನಡ ಸಾಹಿತ್ಯ ಪರಿಷತ್ತಿನ ಆಶಯವಾಗಿದೆ. ಈ ನಿಟ್ಟಿನಲ್ಲಿ ಕನ್ನಡದ ಧ್ರುವತಾರೆ ಕಾರ್ಯಕ್ರಮ ಆರಂಭಿಸಲಾಗಿದೆ ಎಂದರು.

ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಡಾ. ಬಿ. ಎಂ. ಪಟೇಲ್ ಪಾಂಡು, ಸಂಚಾಲಕ ಪ್ರೊ. ಎನ್. ಎಸ್. ಶ್ರೀಧರ್ ಮೂರ್ತಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net