

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ‘ಕನ್ನಡದ ಧ್ರುವತಾರೆ’ ಸಾಧಕರೊಂದಿಗೆ ಮಾತು-ಕತೆ ವಿನೂತನ ಕಾರ್ಯಕ್ರಮ ರೂಪಿಸಲಾಗಿದ್ದು, ಆ. 19ರಂದು ಸಂಜೆ 5 ಗಂಟೆಗೆ ಮೊದಲ ಅವತರಣಿಕೆ ಆಯೋಜಿಸಲಾಗಿದೆ.
ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯುವ ಕಾರ್ಯಕ್ರಮವನ್ನು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಉದ್ಘಾಟಿಸಲಿದ್ದಾರೆ. ನಟ ರಮೇಶ್ ಅರವಿಂದ ‘ಕನ್ನಡದ ಧುವತಾರೆ’ಯಾಗಿ ಭಾಗವಹಿಸಲಿದ್ದಾರೆ. ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಇತರರು ಪಾಲ್ಗೊಳ್ಳಲಿದ್ದಾರೆ.
‘ಕನ್ನಡದ ಧ್ರುವತಾರೆ’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ವೇಳೆ ಅವರು ತಮ್ಮ ಜೀವನ, ಸಾಧನೆ ಹಾಗೂ ಅನುಭವನಗಳನ್ನು ಹಂಚಿಕೊಳ್ಳಲಿದ್ದಾರೆ. ಸಾರ್ವಜನಿಕರು ಅವರೊಂದಿಗೆ ನೇರ ಸಂವಾದ ನಡೆಯಸಬಹುದಾಗಿದೆ.