

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರಸಕ್ತ ಸಾಲಿನ ‘ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಪ್ರಶಸ್ತಿ’ಗೆ ಹಿರಿಯ ನಾಟಕಕಾರ ಮತ್ತು ರಂಗಕಲಾವಿದ ಬಸವರಾಜ ಚೆನ್ನವೀರಪ್ಪ ಬೆಂಗೇರಿ ಆಯ್ಕೆ ಯಾಗಿದ್ದಾರೆ.
ಶ್ರೀನಿವಾಸ ಜೋಗಿಯವರು ತಮ್ಮ ಹೆತ್ತವರಾದ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿಯವರ ಹೆಸರಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು, ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದವರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ. ಧಾರವಾಡ ಜಿಲ್ಲೆ ಕುಂದಗೋಳದ ಸಮೀಪದ ಶಿರೂರು ಗ್ರಾಮದವರಾದ ಬಸವರಾಜ ಬೆಂಗೇರಿ ಅವರು ‘ಶಿರಹಟ್ಟಿ ಕೀರೇಶ್ವರ ಮಹಾತ್ಮೆ’ ನಾಟಕದ ಕೀರೇಶ್ವರನ ಪಾತ್ರಕ್ಕೆ ಹೆಸರಾದವರು. ಈ ನಾಟಕವು ಇದುವರೆಗೂ 1400ಕ್ಕೂ ಹೆಚ್ಚು ಪ್ರದರ್ಶನ ಕಂಡಿದ್ದು ದಾಖಲೆ ನಿರ್ಮಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುರಸ್ಕೃತರ ಆಯ್ಕೆ ಮಾಡಲಾಗಿದೆ.