

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನೀಡಲಾಗುವ 2023ನೇ ಸಾಲಿನ ‘ಚಾವುಂಡರಾಯ ದತ್ತಿ ಪ್ರಶಸ್ತಿ’ಗೆ ಹಿರಿಯ ಲೇಖಕಿ ಡಾ. ಪ್ರೀತಿ ಶುಭಚಂದ್ರ ಅವರು ಆಯ್ಕೆಯಾಗಿದ್ದಾರೆ.
ಶ್ರವಣ ಬೆಳಗೊಳದ ಜಗದ್ಗುರು ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದಾರೆ. ಪ್ರಾಚೀನ ಜೈನ ಸಾಹಿತ್ಯವನ್ನು ಆಧರಿಸಿ ಆಧುನಿಕ ಕನ್ನಡ ಭಾಷೆಯಲ್ಲಿ ರಚಿಸಿದ ಪ್ರಬಂಧ, ಸಂಶೋಧನೆ, ವಿಮರ್ಶೆ, ಕಾದಂಬರಿ, ನಾಟಕ, ಕಥಾ ಸಾಹಿತ್ಯ ಪ್ರಕಾರಗಳ ಲೇಖಕರಿಗೆ ಅಥವಾ ಗ್ರಂಥ ಸಂಪಾದಕರಿಗೆ ಈ ಪ್ರಶಸ್ತಿಯನ್ನು ನೀಡಬೇಕು ಎಂಬುದು ದತ್ತಿಯ ಆಶಯವಾಗಿದೆ. ಪರಿಷತ್ತು ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ಪುರಸ್ಕೃರ ಆಯ್ಕೆ ಮಾಡಲಾಗಿದೆ.
ವಿಮರ್ಶಕಿ, ಲೇಖಕಿ ಹಾಗೂ ಮಹಿಳಾ ವಾದಿಯಾಗಿರುವ ಡಾ. ಪ್ರೀತಿ ಶುಭಚಂದ್ರ ಅವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದವರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮೊಟ್ಟ ಮೊದಲ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆ ಇವರು. ವಚನ ಸಾಹಿತ್ಯ ಮತ್ತು ಜೈನ ಸಾಹಿತ್ಯ ಅವರ ಪ್ರಧಾನ ಆಸಕ್ತಿಯ ವಿಷಯಗಳು. ಇಪ್ಪತ್ತನೆಯ ಶತಮಾನದ ವಚನ ಸಾಹಿತ್ಯ: ಒಂದು ಅಧ್ಯಯನ ಇವರ ಪಿಎಚ್.ಡಿ ಮಹಾ ಪ್ರಬಂಧ. ಸ್ತ್ರೀವಾದದ ಕುರಿತೂ ಸಾಕಷ್ಟು ಅಧ್ಯಯನ ನಡೆಸಿದ್ದಾರೆ.