

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 2024ನೇ ಸಾಲಿನ ‘ಮನುಶ್ರೀ’ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ತೆಂಕಕಾರಂದೂರಿನ ಪ.ರಾಮಕೃಷ್ಣ ಶಾಸ್ತ್ರಿ ಅವರು ವೃತ್ತಿಯಲ್ಲಿ ಕೃಷಿಕರಾಗಿದ್ದು, ಪ್ರವೃತ್ತಿಯಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. 1964ರಿಂದ ಈವರೆಗೂ 104 ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿಯೂ ಕಥೆ-ಕಾದಂಬರಿಗಳನ್ನು ರಚಿಸಿದ್ದಾರೆ. ವಿಜ್ಞಾನ, ಆಧ್ಯಾತ್ಮ, ವೈಚಾರಿಕ ಕ್ಷೇತ್ರಗಳಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮನೋಹರಿ ಪಾರ್ಥಸಾರಥಿಯವರು ಈ ದತ್ತಿಯನ್ನು ಸ್ಥಾಪಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸೇವೆ ಸಲ್ಲಿಸಿದ ಬರಹಗಾರರಿಗೆ ಈ ಪುರಸ್ಕಾರ ನೀಡಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.