

ಸಂಡೂರು: ಕಸಮುಕ್ತ ಭಾರತಕ್ಕಾಗಿ ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದು ಭಾರತೀಯ ಗಣಿ ಬ್ಯೂರೋ ದಕ್ಷಿಣ ವಲಯದ ಗಣಿ ನಿಯಂತ್ರಕ ಜಯಕೃಷ್ಣ ಬಾಬು ತಿಳಿಸಿದರು.
ಇದನ್ನೂ ಓದಿ: ಕಸಮುಕ್ತ ಮಾಡಿದ ಪೌರಕಾರ್ಮಿಕರು
ತಾಲೂಕಿನ ದೇವಗಿರಿಯಲ್ಲಿ ಭಾನುವಾರ ಸ್ಮಯೋರ್ ಗಣಿ ಸಂಸ್ಥೆ, ಭಾರತೀಯ ಗಣಿ ಬ್ಯೂರೋ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚತೆಯೇ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಕ್ಷಿಣ ಭಾರತದಲ್ಲಿ ಸ್ಮಯೋರ್ ಸಂಸ್ಥೆಗೆ ಮಾತ್ರ ಈ ಕಾರ್ಯಕ್ರಮವನ್ನು ವಹಿಸಿರುವುದು ಹೆಮ್ಮೆಯ ವಿಷಯ. ಸೆಪ್ಟಂಬರ್ 15ರಿಂದ ಅ.1ರವರೆಗೆ ವಿವಿಧ ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯವನ್ನು ನಡೆಸಲಾಗಿದೆ ಎಂದರು.
ಸ್ಮಯೋರ್ ಸಂಸ್ಥೆಯ ಗಣಿ ನಿರ್ದೇಶಕ ಮೊಹಮ್ಮದ್ ಅಬ್ದುಲ್ ಸಲೀಂ ಮಾತನಾಡಿ, ಸಂಸ್ಥೆಯು ಕೇಂದ್ರದ ಜವಬ್ದಾರಿಯನ್ನು ನಿರ್ವಹಿಸುತ್ತಿದೆ. 1904ರಲ್ಲಿ ಕುಮಾರಸ್ವಾಮಿ ದೇವಸ್ಥಾನ ಭಾಗದಲ್ಲಿ ಆರಂಭವಾದ ಮೈನಿಂಗ್ 1973ರಲ್ಲಿ ನಿಲ್ಲಿಸಲಾಗಿತ್ತು.
ಜಾಗದಲ್ಲಿ ಪ್ರಾಕೃತಿಕ ಪುನರ್ವಸತಿ ಕಲ್ಪಿಸುವ ಕೆಲಸ ಸಂಸ್ಥೆಯಿಂದ ನಡೆಸಲಾಗುತ್ತಿದೆ. ಗಣಿಗಾರಿಕೆಯ ನಂತರವೂ ಒಂದು ಪ್ರದೇಶವನ್ನು ಹೇಗೆ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಮಾದರಿಯನ್ನಾಗಿ ಮಾಡಲಾಗುತ್ತಿದೆ.
ಹಳೆ ಗಣಿಗಾರಿಕೆ ಪ್ರದೇಶವನ್ನು ಪಿಕ್ನಿಕ್ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸುತ್ತೇವೆ ಎಂದರು. ದೇವಗಿರಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಸ್ವರ್ಣಲತಾ, ಪ್ರಾದೇಶಿಕ ಗಣಿ ನಿಯಂತ್ರಾಧಿಕಾರಿ ಡಾ.ಸುರೇಶ್ ಪ್ರಸಾದ್, ಪ್ರಕಾಶ್ ಬಾಬು, ಎಸ್.ಕಾರ್ತಿಕ್, ಮೈನ್ಸ್ ವ್ಯವಸ್ಥಾಪಕ ಭರತ್ ಕುಮಾರ್, ದೀಪಕ್ ಕುಕ್ಕೆ ಇದ್ದರು.