ಇಳಿಕೆಯಾದ ಕಾರವಾರ ಬಂದರಿನ ಆದಾಯ, ಕಾರಣವೇನು..?

Karwar-port
Published on

ಕಾರವಾರ: ಹೂಳಿನ ಸಮಸ್ಯೆ, ಹೆಚ್ಚಿದ ಕಸ್ಟಮ್ಸ್ ಶುಲ್ಕವು ಕಾರವಾರ ಬೈತಖೋಲ್ ವಾಣಿಜ್ಯ ಬಂದರಿನ ನೇರ ಆದಾಯಕ್ಕೆ ಹೊಡೆತ ತಂದಿದೆ. ಆದರೆ, ಕಸ್ಟಮ್ಸ್ ಆದಾಯ ಹೆಚ್ಚಳವಾಗಿದೆ. 2023-24 ನೇ ಆರ್ಥಿಕ ವರ್ಷದಲ್ಲಿ 18 ಕೋಟಿ ರೂ. ಮಾತ್ರ ನೇರ ಆದಾಯ ಬಂದಿದ್ದು, ಕಳೆದ ಆರ್ಥಿಕ ವರ್ಷಕ್ಕಿಂತ ಆದಾಯದಲ್ಲಿ 3 ಕೋಟಿ ರೂ. ಇಳಿಕೆಯಾದಂತಾಗಿದೆ. ಆಮದಿನ ಪ್ರಮಾಣ ಹೆಚ್ಚಿದ್ದರೂ ರಫ್ತಿನ ಪ್ರಮಾಣ ಗಣನೀಯ ಇಳಿಕೆಯಾಗಿದ್ದು, ಆದಾಯ ಕಡಿಮೆಯಾಗಲು ಕಾರಣ.
2023 ರ ಏಪ್ರಿಲ್‌ನಿಂದ 2024 ರ ಮಾರ್ಚ್ ಅಂತ್ಯದವರೆಗೆ ಬಂದರಿಗೆ 122 ಹಡಗುಗಳು ಬಂದಿದ್ದು, ಒಟ್ಟು 9.9 ಲಕ್ಷ ಮೆಟ್ರಿಕ್ ಟನ್ ಸಾಮಗ್ರಿಗಳನ್ನು ಆಮದು ರಫ್ತು ಮಾಡಲಾಗಿದೆ. 2023 ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಕಾರವಾರ ಬಂದರಿಗೆ 148 ಹಡಗುಗಳು ಬಂದಿದ್ದವು. 10.07 ಲಕ್ಷ ಮೆಟ್ರಿಕ್ ಟನ್ ಸಾಮಗ್ರಿಗಳನ್ನು ಆಮದು, ರಫ್ತು ಮಾಡಲಾಗಿತ್ತು.
ಕಸ್ಟಮ್ಸ್ ಇಲಾಖೆಗೆ 2023 ರಲ್ಲಿ 276.95 ಕೋಟಿ ರೂ. ಆದಾಯ ಬಂದಿತ್ತು. 2024 ರಲ್ಲಿ ಅದು 308.58 ಕೋಟಿ ರೂ.ಗೆ ಹೆಚ್ಚಳ ಕಂಡಿದೆ. 2023 ರಲ್ಲಿ ಕಾರವಾರ ಬಂದರಿನಿAದ 3.60 ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಅದು 2024 ರಲ್ಲಿ 3.21 ಕೋಟಿ ರೂ.ಗೆ ಕಡಿಮೆಯಾಗಿದೆ.

ಹೂಳು ಗೋಳು:

ತೈಲ ತುಂಬಿದ ದೊಡ್ಡ ಹಡಗುಗಳು ದಕ್ಕೆಗೆ ಬಂದು ನಿಲ್ಲಲು ನೀರಿನ ಮೇಲ್ಮೈಯಿಂದ 9 ಮೀಟರ್ ಆಳವಿರಬೇಕು. ಆದರೆ, ಕಾರವಾರ ಬಂದರಿನಲ್ಲಿ ಹೂಳು ತುಂಬಿ 6.5 ಮೀಟರ್‌ಗಿಂತ ಕಡಿಮೆ ಆಳವಾಗಿತ್ತು. ಇದರಿಂದ ದೊಡ್ಡ ಹಡಗುಗಳು ಬಂದು ನಿಲ್ಲದಂತಾಗಿದ್ದವು. ಇದೇ ಕಾರಣಕ್ಕೆ ಪಾಮ್ ಎಣ್ಣೆಯ ಆಮದು ಕಾರವಾರದಲ್ಲಿ ಸಂಪೂರ್ಣವಾಗಿ ಸ್ಥಗಿತವಾಯಿತು. ಇತರ ಹಡಗುಗಳೂ ಮುಂಬೈ, ಗುಜರಾತ್‌ನಲ್ಲಿ ಅರ್ಧ ಸಾಮಗ್ರಿ ಖಾಲಿ ಮಾಡಿ ನಂತರ ಕಾರವಾರ ತಲುಪುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಬರುವ ಹಡಗುಗಳ ಸಂಖ್ಯೆಯೇ ಇಳಿಮುಖವಾಗಿದೆ.

ಕಸ್ಟಮ್ಸ್ ಸುಂಕ ಹೆಚ್ಚಳ:

ಕಬ್ಬಿನ ಉಪ ಉತ್ಪನ್ನ ಮೊಲಾಸಿಸ್(ಕಾಕಂಬಿ) ಯುರೋಪಿಯನ್ ರಾಷ್ಟ್ರಗಳಿಗೆ ಕಾರವಾರ ಬಂದರಿನಿಂದ ರಫ್ತಾಗುತ್ತಿತ್ತು. ಅದಕ್ಕೆ ಶೇ.15 ರಷ್ಟು ಕಸ್ಟಮ್ಸ್ ಸುಂಕ ವಿಧಿಸಲಾಗುತ್ತಿತ್ತು. ಆದರೆ, ಮೊಲಾಸಿಸ್‌ನಿಂದ ಇಂಧನ ತಯಾರಿಸುವ ಅವಕಾಶವಿದ್ದು, ದೇಶದಲ್ಲೇ ಬಳಕೆ ಹೆಚ್ಚಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಕಸ್ಟಮ್ಸ್ ಸುಂಕವನ್ನು ಶೇ.50 ಕ್ಕೆ ಏರಿಸಿದೆ. ಇದರಿಂದ ಆರ್ಥಿಕ ವರ್ಷದ ಎರಡನೇ ಭಾಗದಲ್ಲಿ ಮೊಲೈಸಿಸ್ ಕಾರವಾರದಿಂದ ರಫ್ತಾಗಿಲ್ಲ. 2023 ರಲ್ಲಿ 5.17 ಲಕ್ಷ ಮೆಟ್ರಿಕ್ ಟನ್ ಮೊಲಾಸಿಸ್ ರಫ್ತಾಗಿದ್ದರೆ, 2024 ರಲ್ಲಿ ಅದರ ಪ್ರಮಾಣ 1.95 ಲಕ್ಷ ಮೆಟ್ರಿಕ್ ಟನ್‌ಗೆ ಇಳಿಕೆ ಕಂಡಿದೆ.

ಡಾಂಬರು ಆಮದೂ ಇಳಿಕೆ

ರಾಜ್ಯ ಸರ್ಕಾರದ ಗ್ಯಾರಂಟಿ ಪ್ರಭಾವವೂ ಬಂದರಿನ ಆದಾಯದ ಮೇಲೆ ಪರಿಣಾಮ ಬೀರಿದೆ.! ರಾಜ್ಯದ ಬಹುತೇಕ ಭಾಗಗಳಿಗೆ ರಸ್ತೆ ನಿರ್ಮಾಣ ಕಾರ್ಯಕ್ಕೆ ಬಳಕೆಯಾಗುವ ಡಾಂಬರು ಕಾರವಾರ ಬಂದರಿನಿಂದಲೇ ಆಮದಾಗುತ್ತಿತ್ತು. ಇರಾನ್ ಮುಂತಾದ ರಾಷ್ಟ್ರಗಳಿಂದ ತೈಲದ ಉಪ ಉತ್ಪನ್ನವಾಗಿರುವ ಬಿಟುಮಿನ್ (ಡಾಂಬರು)ನ್ನು ಕಾರವಾರಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಬಿಸಿಯಾಗಿರುವ ಅದನ್ನು ತುಂಬಿಟ್ಟುಕೊಳ್ಳಲೆಂದೇ ಕಾರವಾರದಲ್ಲಿ 10 ಕ್ಕೂ ಅಧಿಕ ವಿಶಿಷ್ಟ ಸಂಗ್ರಹಾಗಾರಗಳನ್ನು ಮಾಡಲಾಗಿದೆ. ವಿವಿಧ ಕಂಪನಿಗಳು ಬಿಟುಮಿನ್ ತರಿಸಿ ಗುತ್ತಿಗೆದಾರರಿಗೆ ಮಾರಾಟ ಮಾಡುವ ಉದ್ಯಮ ನಡೆಸುತ್ತಿವೆ. ಆದರೆ, ಈ ವರ್ಷ ಗುತ್ತಿಗೆದಾರರ ಬಿಲ್ ಬಾಕಿ ಹಾಗೂ ಗ್ಯಾರಂಟಿ ಯೋಜನೆಗಳಿಂದ ರಸ್ತೆ ಕಾಮಗಾರಿಗಳಿಗೆ ಹಣ ತೊಡಗಿಸದ ಕಾರಣ ಡಾಂಬರು ಬಳಕೆಯೇ ಕಡಿಮೆಯಾಗಿದೆ. ಹಿಂದೆ ತರಿಸಿಟ್ಟುಕೊಂಡ ಡಾಂಬರನ್ನೇ ಖರೀದಿಸುವವರು ಇಲ್ಲವಾಗಿದ್ದಾರೆ. ಕಾರವಾರ ಬಂದರಿನಲ್ಲಿ 2023 ರ ಅಂತ್ಯಕ್ಕೆ 3.10 ಲಕ್ಷ ಮೆಟ್ರಿಕ್ ಟನ್ ಡಾಂಬರನ್ನು ಆಮದು ಮಾಡಿಕೊಳ್ಳಲಾಗಿತ್ತು. 2024 ರ ಅಂತ್ಯಕ್ಕೆ 2.95 ಲಕ್ಷ ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳಲಾಗಿದೆ. ಎಂದರೆ ಸುಮಾರು 14,791 ಮೆಟ್ರಿಕ್ ಟನ್ ಡಾಂಬರು ಆಮದು ಕಡಿಮೆಯಾಗಿದೆ.

ಕಾರವಾರ ಬಂದರಿನ ಆಮದು, ರಫ್ತು ವಹಿವಾಟು

  • 2022-23 2023-24
  • ಉತ್ಪನ್ನಗಳು ಆಮದು ರಫ್ತು ಆಮದು ರಫ್ತು
  • (ಮೆಟ್ರಿಕ್ ಟನ್‌ಗಳಲ್ಲಿ) (ಮೆಟ್ರಿಕ್ ಟನ್‌ಗಳಲ್ಲಿ)
  • ಡೀಸೆಲ್ 36764 ---- 69058 2165
  • ಪಾಮ್ ಎಣ್ಣೆ 3001 ---- 52094 ----
  • ರಾಕ್ ಫಾಸ್ಪೇಟ್ 30750 ---- 114622 ----
  • ಕೈಗಾರಿಕೆ ಉಪ್ಪು 104760 ---- 132421 ----
  • ಕಾಕಂಬಿ ---- 517054 ---- 95930
  • ಡಾಂಬರು 310189 ---- 295398 ----
  • ಕಾಸ್ಟಿಕ್ ಸೊಡಾ ---- 5239 ---- ----
  • ಇಂಧನ ಎಣ್ಣೆ ---- ---- 9881 ----
  • ಕಬ್ಬಿಣದ ಅದಿರು ---- ---- ---- 38320

ಒಟ್ಟು 4,85,464 5,22,293 6,73,474 2,36,415

ಮಾರ್ಚ್ ತಿಂಗಳಲ್ಲಿ ಕಾರವಾರ ಬಂದರಿನ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ. ನೇವಿಗೇಶನ್‌ಗೆ ಬೇಕಾದ ಎಲ್ಲ ಆಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದ ಇನ್ನು ಆದಾಯ ಹೆಚ್ಚುವ ಸಾಧ್ಯತೆ ಇದೆ.ಕ್ಯಾ.ಸಿ.ಸ್ವಾಮಿಬಂದರು ಇಲಾಖೆ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net