

ಕಾರವಾರ: ನಗರದ ಸವಿತಾ ಸರ್ಕಲ್ ಎದುರಿಗೆ ಕೆಡವಲಾಗಿರುವ ಗಾಂಽ ಮಾರುಕಟ್ಟೆಯ ಅವಶೇಷಗಳನ್ನು ಸದ್ಯಕ್ಕೆ ತೆರವು ಮಾಡದೇ ಇರಲು ಸೋಮವಾರ ಆಯೋಜನೆಯಾಗಿದ್ದ ಕಾರವಾರ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ನೂತನ ಅಧ್ಯಕ್ಷ ಬಿಜೆಪಿಯ ರವಿರಾಜ ಅಂಕೋಲೆಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಸತೀಶ ಸೈಲ್ ಅವರ ಸಲಹೆಯಂತೆ ಈ ನಿರ್ಣಯ ಕೈಗೊಳ್ಳಲಾಯಿತು.
ಕೆಲವು ಮಳಿಗೆಗಳ ತೆರವಿಗೆ ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ಗಾಂಽ ಮಾರುಕಟ್ಟೆಯನ್ನು ಅರ್ಧ ಕೆಡವಿ ಬಿಟ್ಟು ಎರಡು ವರ್ಷವಾಗುತ್ತ ಬಂದಿದೆ. ಅವಶೇಷಗಳು ಅಸಹ್ಯ ಹುಟ್ಟಿಸುತ್ತಿವೆ. ಅಧ್ಯಕ್ಷ ರವಿರಾಜ ಅಂಕೋಲೆಕರ್ ನೇತೃತ್ವದಲ್ಲಿ ಎರಡು ದಿನದ ಹಿಂದೆ ಅವಶೇಷಗಳನ್ನು ತೆರವು ಮಾಡಲು ಮುಂದಾದಾಗ ಪ್ರತಿ ಪಕ್ಷ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಸಾಮಾನ್ಯ ಸಭೆಯಲ್ಲಿ ಚರ್ಚಿಸದೇ ಕ್ರಮ ವಹಿಸಿದ್ದು, ತಪು÷್ಪ ಎಂದು ಆಕ್ಷೇಪಿಸಿದ್ದರು. ಸೋಮವಾರ ಸಭೆಯಲ್ಲೂ ಇದೇ ವಿಚಾರವಾಗಿ ಆಡಳಿತ ಹಾಗೂ ಪ್ರತಿ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ನಂತರ ಮಾತನಾಡಿದ ಶಾಸಕ ಸತೀಶ ಸೈಲ್, ಮಣ್ಣು ತೆರವು ಮಾಡಿಟ್ಟಲ್ಲಿ ಬೇರೆ ವ್ಯಾಪಾರಿಗಳು ಬಂದು ಅಲ್ಲಿ ಅತಿಕ್ರಮಿಸಿಕೊಳ್ಳುವ ಸಾಧ್ಯತೆ ಇದೆ. ಮತ್ತೆ ಅವರನ್ನು ಎಬ್ಬಿಸಿ, ಗಲಾಟೆ ಮಾಡಿಕೊಳ್ಳಬೇಕು. ಅದರ ಬದಲು ಮಳಿಗೆಗಳ ತೆರವು ಮಾಡದಂತೆ ನ್ಯಾಯಾಲಯದ ಮೆಟ್ಟಿಲೇರಿರುವ ವ್ಯಾಪಾರಿಗಳ ಸಭೆಯನ್ನು ಕರೆದು, ಸಂಧಾನ ನಡೆಸೋಣ. ವಕೀಲರೊಂದಿಗೆ ಚರ್ಚಿಸಿ ಕಾನೂನು ಹೋರಾಟ ಮಾಡೋಣ ಎಂದು ಸತೀಶ ಸೈಲ್ ತಿಳಿಸಿದರು.
ಪಾರ್ಕಿಂಗ್ ಇಲ್ಲದ ಹಾಗೂ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿದ ಕಟ್ಟಡಗಳ ವಿರುದ್ಧ ಕ್ರಮ ವಹಿಸಬೇಕಿದೆ. ಅದಕ್ಕೆ ಐವರು ಸದಸ್ಯರ ಸಮಿತಿ ಮಾಡಿಕೊಂಡು ಪರಿಶೀಲನೆ ಡನೆಸಿ. ಟ್ಯಾಗೋರ್ ಕಡಲ ತೀರದ ಪಕ್ಕದಲ್ಲಿ ಹಳೆಯ ಮೀನು ಮಾರುಕಟ್ಟೆಯ ಸಮೀಪ ಸ್ಕೇಟಿಂಗ್ ರಿಂಕ್ ಮಾಡಬೇಕು. ಅದಕ್ಕೆ ನಗರಸಭೆ ಸಹಕಾರ ನೀಡಬೇಕು ಎಂದ ಸತೀಶ ಸೈಲ್ ನಗರಸಭೆ ಸದಸ್ಯರಿಗೆ ಮನವಿ ಮಾಡಿದರು. ರಾಷ್ಟ್ರೀಯ ಹೆದ್ದಾರಿ 66 ಫ್ಲೈ ಓವರ್ ಖಾಲಿ ಜಾಗವನ್ನು ನಗರಸಭೆ ವಶಕ್ಕೆ ಪಡೆದು, ಅಭಿವೃದ್ಧಿ ಮಾಡಬೇಕು ಎಂದು ಸಲಹೆ ನೀಡಿದರು.
ನಗರೋತ್ಥಾನ ಕಾಮಗಾರಿಯ 13 ಕೋಟಿ ರೂ. ಸರ್ಕಾರಕ್ಕೆ ವಾಪಸಾಗಿದೆ. ಇನ್ನೊಂದೆಡೆ ಗುತ್ತಿಗೆದಾರರಿಗೆ 13 ಕೋಟಿ ರೂ.ಗಳನ್ನು ಪಾವತಿಸುವುದು ಬಾಕಿ ಇದೆ. ನಗರೋತ್ಥಾನ ಹಣವನ್ನು ಮರಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಿರಿ. ಗುತ್ತಿಗೆದಾರರಿಗೆ 3 ವರ್ಷ ಹಣ ಪಾವತಿಸದೇ ಇದ್ದಲ್ಲಿ ನಂತರ ಕಾನೂನು ಬದ್ಧವಾಗಿ ಹಣ ಪಾವತಿಸಲು ಬರುವುದಿಲ್ಲ. ಇದರಿಂದ ಅವರಿಗೆ ಪ್ರತಿ ವರ್ಷ ಹಣ ಪಾವತಿ ಬಾಕಿ ಪ್ರಮಾಣಪತ್ರ ನೀಡಿ ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ನೂತನವಾಗಿ ಅಳವಡಿಸಲಾದ ನೂತನ ಬೀದಿ ದೀಪಗಳು ಸರಿಯಾಗಿ ಉರಿಯದ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆದಾರರನ್ನು ಸಭೆಗೆ ಕರೆಸಲು ನಡೆಸಿದ ಪ್ರಯತ್ನ ವಿಫಲವಾಯಿತು. ಗುತ್ತಿಗೆದಾರರ ಮೇಲೆ ಕಾನೂನಿನಂತೆ ಕ್ರಮ ವಹಿಸುವಂತೆ ಶಾಸಕ ಸತೀಶ ಸೈಲ್ ಸೂಚಿಸಿದರು.